ಬೆಳ್ತಂಗಡಿ ಮೇ 22: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಬಂಧನಕ್ಕಾಗಿ ಪೊಲೀಸರು ಇಡೀ ದಿನ ನಡೆಸಿದ ಪ್ರಯತ್ನ ಕೊನೆಗೂ ಫಲ ನೀಡಲಿಲ್ಲ. ಬಿಜೆಪಿ ಕಾರ್ಯಕರ್ತರ ಒಕ್ಕೊರಲ ಕೂಗು, ಬಂಧನಕ್ಕೆ ಅವಕಾಶ ನೀಡುವುದಿಲ್ಲ ಎಂಬ ಬಿಗಿ ಪಟ್ಟಿಗೆ ಪೊಲೀಸರು ಕಡೆಗೂ ಮನವೊಲಿದಿದ್ದು ವಿಚಾರಣೆಗೆ ಬರುವಂತೆ ಹೇಳಿ ನೋಟೀಸ್ ಕೊಟ್ಟು ತೆರಳಿದ್ದಾರೆ.
ಹರೀಶ್ ಪೂಂಜ ಅವರ ಗರ್ಡಾಡಿಯ ಮನೆಯಲ್ಲಿ ಬೆಳಗ್ಗಿನಿಂದಲೇ ಭಾರೀ ಸಂಖ್ಯೆಯಲ್ಲಿ ಪೊಲೀಸರು ಮತ್ತು ಕಾರ್ಯಕರ್ತರು ಸೇರಿದ್ದರು. ಎರಡು ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಶಾಸಕರ ಬಂಧನಕ್ಕೆ ಆಗಮಿಸಿದ್ದಾರೆಂದು ತಿಳಿದ ಕಾರ್ಯಕರ್ತರು ಮನೆಯ ಮುಂಭಾಗದಲ್ಲಿ ಸೇರಿದ್ದರು. ದಿನವಿಡೀ ವಕೀಲರು ಮತ್ತು ಬಿಜೆಪಿ ನಾಯಕರು, ಶಾಸಕರು ಪೊಲೀಸರ ಜೊತೆಗೆ ಮಾತುಕತೆ ನಡೆಸಿದರೂ ಫಲ ನೀಡದೇ ಇದ್ದಾಗ ಮನೆಯ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರ ಸಂಖ್ಯೆಯೂ ಹೆಚ್ಚತೊಡಗಿತು. ಪೊಲೀಸರು ಕೋಟೆ ಭೇದಿಸಲಾಗದಷ್ಟು ಕಾರ್ಯಕರ್ತರು ಸೇರಿದ್ದು ಮತ್ತು ಕತ್ತಲು ಆವರಿಸಿದ್ದರಿಂದ ಡಿವೈಎಸ್ಪಿ ವಿಜಯಕುಮಾರ್ ಬಂಧನ ಕ್ರಮದಿಂದ ಹಿಂದೆ ಸರಿದಿದ್ದಾರೆ.
ಇದೆಲ್ಲ ಷಡ್ಯಂತ್ರವನ್ನೂ ಬಿಜೆಪಿ ಕಾರ್ಯಕರ್ತರು ಸಮರ್ಥವಾಗಿ ಎದುರಿಸಿದ್ದಾರೆ, ಇವತ್ತು 9 ಪೊಲೀಸ್ ತುಕಡಿಗಳು, 25 ಎಸ್ಐಗಳು, ಒಬ್ಬ ಡಿವೈಎಸ್ಪಿ, ಮೂರ್ನಾಲ್ಕು ಸರ್ಕಲ್ ಇನ್ಸ್ ಪೆಕ್ಟರ್ ಗಳು ನನ್ನನ್ನು ಬಂಧಿಸಲು ಬಂದಿದ್ದರು. ಆದರೆ ಇವರೆಲ್ಲರನ್ನೂ ಹಿಮ್ಮೆಟ್ಟಿಸಿದ್ದು ನಮ್ಮ ಕಾರ್ಯಕರ್ತರು. ನಾನು ಹೈಕೋರ್ಟಿನಲ್ಲಿ ಕಾನೂನು ಪ್ರಾಕ್ಟೀಸ್ ಮಾಡಿ ಬಂದವನು. ಕಾನೂನು ಬಗ್ಗೆ ತಿಳಿದುಕೊಂಡಿದ್ದೇನೆ. ಪೊಲೀಸರು ಪಾಠ ಮಾಡುವ ಅಗತ್ಯವಿಲ್ಲ. ವಕೀಲರು ಪೊಲೀಸರಿಗೆ, ಈ ಪ್ರಕರಣದಲ್ಲಿ ಬಂಧನ ಮಾಡಿದರೆ, ಮುಂದೆ ನಿಮಗೆ ತೊಂದರೆ ಆಗಬಹುದು ಎಂಬ ಅರಿವು ಮೂಡಿಸಿದ್ದಾರೆ. ಈ ಬಗ್ಗೆ ಅರಿತುಕೊಂಡ ಪೊಲೀಸ್ ಅಧಿಕಾರಿಗಳು ಬಂಧನ ಕೈಬಿಟ್ಟು ತೆರಳಿದ್ದಾರೆ ಎಂದು ಹರೀಶ್ ಪೂಂಜ ಹೇಳಿದರು.
ಈ ಹಿನ್ನಲೆಯಲ್ಲಿ ಪೊಲೀಸರು ತಕ್ಷಣ ಠಾಣೆಗೆ ಹಾಜರಾಗುವಂತೆ ನೋಟೀಸ್ ನೀಡಿ ಹಿಂತಿರುಗುದ್ದರು. ಇದೀಗ 9.30ರ ಸುಮಾರಿಗೆ ಶಾಸಕ ಹರೀಶ್ ಪೂಂಜ ಅವರು ಸ್ವತಹ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿ ಶರಣಾಗಿದ್ದಾರೆ.
ಬೆಳ್ತಂಗಡಿ ಠಾಣೆಯಲ್ಲಿ ಶಾಸಕ ಪೂಂಜ ವಿರುದ್ಧ ಎರಡು ಎಫ್ಐಆರ್ ದಾಖಲಾಗಿದ್ದು ಅದರ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪ್ರತಿಭಟನೆ ಸಭೆಯಲ್ಲಿ ಪೊಲೀಸರಿಗೆ ನಿಂದಿಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಕಲಂ:143, 147, 341, 504, 506 ಜೊತೆಗೆ 149 ಐ.ಪಿ.ಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರನ್ನು ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆ ನಡೆಸಿ, ಸ್ಟೇಷನ್ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿರುತ್ತದೆ ಎಂದು ಜಿಲ್ಲಾ ಎಸ್ಪಿ ರಿಷ್ಯಂತ್ ಸಿಂಗ್ ರಾತ್ರಿ 10.45ಕ್ಕೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post