ಬೆಂಗಳೂರು, ಮೇ 20: ಬೆಂಗಳೂರು ಪೊಲೀಸರು ಪ್ರಮುಖ ಕಾರ್ಯಾಚರಣೆಯಲ್ಲಿ ಮನೆಗಳ್ಳರನ್ನು ಬಂಧಿಸಿದ್ದಾರೆ. ಇವರಲ್ಲಿ, ಓರ್ವ ತಾನು ಕಳ್ಳತನ ಮಾಡಿದ್ದ ಹಣದಲ್ಲಿ 20 ಮಕ್ಕಳ ಶಾಲಾ, ಕಾಲೇಜು ಫೀಸ್ ಕಟ್ಟಿದ್ದಾನೆ. ಸದ್ಯ, ಬ್ಯಾಡರಹಳ್ಳಿ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಬೇಗೂರು ನಿವಾಸಿ ಶಿವು ಅಲಿಯಾಸ್ ಶಿವರಪ್ಪನ್, ಈತನ ಸ್ನೇಹಿತರಾದ ಅನಿಲ್ ಅಲಿಯಾಸ್ ಜಗ್ಗ ಮತ್ತು ವಿವೇಕ ಬಂಧಿತರು.
ಬೇಗೂರು ನಿವಾಸಿ ಶಿವು ಅಲಿಯಾಸ್ ಶಿವರಪ್ಪನ್ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದಾನೆ. ಹೆಂಡತಿ ಮಕ್ಕಳಿಲ್ಲದ ಶಿವು ಆತ್ಮಹತ್ಯೆಗೆ ಯೋಚಿಸಿದ್ದನಂತೆ. ಆದರೆ, ಏರಿಯಾದಲ್ಲಿ ಸ್ನೇಹಿತರು ಮಕ್ಕಳ ಸ್ಕೂಲ್ ಫೀಸ್ ಕಟ್ಟಲು ಪರದಾಡುತ್ತಿರುವುದನ್ನು ನೋಡಿದ್ದಾನೆ.
ಬಳಿಕ ಬ್ಯಾಡರಹಳ್ಳಿ ಸೇರಿದಂತೆ ಹಲವೆಡೆ ಮನೆಗಳಿಗೆ ಕನ್ನ ಹಾಕಿದ್ದಾನೆ. ಕದ್ದ ಚಿನ್ನಾಭರಣವನ್ನು ಸ್ನೇಹಿತರಾದ ಅನಿಲ್ ಅಲಿಯಾಸ್ ಜಗ್ಗ ಮತ್ತು ವಿವೇಕನ ಸಹಾಯದಿಂದ ಮಾರಾಟ ಮಾಡಿದ್ದಾನೆ. ಮಾರಾಟ ಮಾಡಿ ಬಂದ ಹಣದಲ್ಲಿ 20 ಮಕ್ಕಳ ಶಾಲಾ, ಕಾಲೇಜು ಫೀಸ್ ಕಟ್ಟಿದ್ದಾನೆ.
ಸ್ನೇಹಿತರಿಗೂ ಸಹಾಯ ಮಾಡಿದ್ದ: ಪೊಲೀಸ್ ತನಿಖೆಯಲ್ಲಿ ಈ ಗ್ಯಾಂಗ್ ತಮಿಳುನಾಡಿನಲ್ಲಿ ಕದ್ದ ಚಿನ್ನವನ್ನು 22 ಲಕ್ಷ ರೂ.ಗೆ ಮಾರಾಟ ಮಾಡಿದೆ ಎಂದು ತಿಳಿದುಬಂದಿದೆ. ಬಂದ ಹಣದಲ್ಲಿ ವಿವೇಕನಿಗೆ 4 ಲಕ್ಷ, ಅನಿಲ್‌ಗೆ 4 ಲಕ್ಷ ರೂ. ಮೌಲ್ಯದ ಆಟೋ ಕೊಡಿಸಿದ್ದಾನೆ. ಉಳಿದ 14 ಲಕ್ಷದಲ್ಲಿ ಏರಿಯಾದ 20 ಮಕ್ಕಳ ಶಾಲೆ ಹಾಗೂ ಕಾಲೇಜ್ ಫೀಸ್ ಕಟ್ಟಿದ್ದಾನೆ. ಮನೆಗಳ್ಳರ ಬೆನ್ನತ್ತಿದ್ದ ಬ್ಯಾಡರಹಳ್ಳಿ ಪೊಲೀಸರಿಂದ ಮೂವರನ್ನೂ ಬಂಧಿಸಿದ್ದಾರೆ. ಆರೋಪಿಗಳಾದ ಶಿವು, ಅನಿಲ್ ಹಾಗೂ ವಿವೇಕ್ನನ್ನು ಬಂಧಿಸಿ 24 ಲಕ್ಷ ಮೌಲ್ಯದ 260 ಗ್ರಾಂ ಚಿನ್ನದ ಗಟ್ಟಿಯನ್ನು ಜಪ್ತಿ ಮಾಡಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post