ನವದೆಹಲಿ: ದೇಶದ 15ನೇ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಆಯ್ಕೆಯಾಗಿದ್ದಾರೆ. ಮುರ್ಮು ಅವರು ಶೇ 64ರಷ್ಟು ಮತಗಳನ್ನು ಪಡೆದಿದ್ದಾರೆ. ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಯಶವಂತ ಸಿನ್ಹಾ ನಿರಾಸೆ ಅನುಭವಿಸಿದ್ದಾರೆ. ಗುರುವಾರ ನಡೆದ ಮತ ಎಣಿಕೆಯಲ್ಲಿ ಮುರ್ಮು ಅವರು 6,76,803 ಮತಗಳನ್ನು ಪಡೆದರೆ, ಸಿನ್ಹಾ ಅವರು 3,80,177 ಮತಗಳನ್ನು ಪಡೆದರು. 10 ಗಂಟೆಗಳಿಗೂ ಹೆಚ್ಚುಕಾಲ ನಡೆದ ಮತ ಎಣಿಕೆಯ ಬಳಿಕ ಚುನಾವಣಾಧಿಕಾರಿ ಪಿ.ಸಿ. ಮೋದಿ ಅವರು ಮುರ್ಮು ಅವರ ಗೆಲುವನ್ನು ಪ್ರಕಟಿಸಿದರು.
ಮುರ್ಮು ಅವರ ಪರವಾಗಿ ಆಂಧ್ರಪ್ರದೇಶದ ಎಲ್ಲ ಶಾಸಕರು ಮತಚಲಾಯಿಸಿದ್ದಾರೆ. ಸಿನ್ಹಾ ಅವರ ಪರ ಕೇರಳದ ಎಲ್ಲ ಶಾಸಕರು ಮತ ಹಾಕಿದ್ದಾರೆ. ಮೂರನೇ ಸುತ್ತಿನ ಮತ ಎಣಿಕೆಯ ಬಳಿಕ ಶೇ 53ರಷ್ಟು ಮತಗಳನ್ನು ಪಡೆದಿದ್ದ ಮುರ್ಮು ಅವರ ಗೆಲುವು ಖಚಿತವಾಗಿತ್ತು. ಆಗ ಇನ್ನು 10 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮತ ಎಣಿಕೆ ಬಾಕಿಯಿತ್ತು. ಮುರ್ಮು ಅವರು ಜುಲೈ 25ರಂದು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮು ಪರವಾಗಿ ಅರುಣಾಚಲ ಪ್ರದೇಶದ ನಾಲ್ವರನ್ನು ಹೊರತುಪಡಿಸಿ ಉಳಿದೆಲ್ಲ ಶಾಸಕರು ಮತ ಹಾಕಿದ್ದಾರೆ. ಮೂಲಗಳ ಪ್ರಕಾರ, 17 ಸಂಸದರು ಅಡ್ಡ ಮತದಾನ ಮಾಡಿದ್ದು, ಮುರ್ಮು ಪರವಾಗಿ ಮತ ಚಲಾಯಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post