ತಿರುವನಂತಪುರಂ(ಕೇರಳ): ದೇಶದ ಪ್ರಮುಖ ಕಮ್ಯೂನಿಸ್ಟ್ ನಾಯಕ, ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಅವರು ತಮ್ಮ 101ನೇ ವಯಸ್ಸಿನಲ್ಲಿ ಇಂದು ಇಹಲೋಕ ತ್ಯಜಿಸಿದರು. ಈ ಕುರಿತು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಮಾಹಿತಿ ನೀಡಿದ್ದಾರೆ.
ಕಳೆದೊಂದು ತಿಂಗಳಿನಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ನಾಯಕ, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕೇರಳ ರಾಜಕೀಯ ಇತಿಹಾಸದಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಅಚ್ಯುತಾನಂದನ್, ಸಿಪಿಐ (ಎಂ)ನ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು. ಕಾರ್ಮಿಕರ ಹಕ್ಕುಗಳು, ಭೂ ಸುಧಾರಣೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದರು. 2006ರಿಂದ 2011ರವರೆಗೆ ಕೇರಳ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ರಾಜ್ಯ ವಿಧಾನಸಭೆಗೆ ಏಳು ಬಾರಿ ಆಯ್ಕೆಯಾಗಿದ್ದರು. ಮೂರು ಬಾರಿ ವಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದರು.
ಈಗಿನ ಆಲಪ್ಪುಳ ಜಿಲ್ಲೆಯ ಪುನ್ನಪ್ರಾದಲ್ಲಿ 1923 ಅಕ್ಟೋಬರ್ 20ರಂದು ಜನಿಸಿದ್ದ ಅಚ್ಯುತಾನಂದನ್, ಬಾಲ್ಯದಲ್ಲೇ ಪೋಷಕರನ್ನು ಕಳೆದುಕೊಂಡಿದ್ದರು. 14ನೇ ವಯಸ್ಸಿಗೆ ಶಾಲೆ ತೊರೆದು ನೌಕರಿಗೆ ಸೇರಿದ್ದರು. ತೆಂಗಿನ ನಾರಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಲೇ ಅಲ್ಲಿ ನಾಯಕರಾಗಿ ಬೆಳೆದರು.
1940ರಲ್ಲಿ ಕಮ್ಯೂನಿಸ್ಟ್ ಪಕ್ಷದ ಸದಸ್ಯತ್ವ ಪಡೆದು ಪಕ್ಷದ ಕಾರ್ಯಕರ್ತರಾದರು. 1946ರಲ್ಲಿ ನಡೆದ ಐತಿಹಾಸಿಕ ಪುನ್ನಪ್ರಾ-ವಯಲಾರ್ ದಂಗೆಯನ್ನು ಮುನ್ನಡೆಸಿ, ಬಂಧನಕ್ಕೂ ಒಳಗಾಗಿದ್ದರು. ಬಂಧನದಲ್ಲಿ ಸಾಕಷ್ಟು ದೌರ್ಜನ್ಯಕ್ಕೆ ಒಳಗಾದರು. ಇದಾದ ಬಳಿಕ ಪಕ್ಷದಲ್ಲಿ ಪ್ರಮುಖ ನಾಯಕರಾಗಿ ಬೆಳೆದರು. ಕಮ್ಯೂನಿಸ್ಟ್ ಕಠಿಣ ಶಿಸ್ತು ಮತ್ತು ನಿಲುವುಗಳಿಂದ ಜನಾನುರಾಗಿಯಾದರು. ಪಕ್ಷ ನೀಡಿದ ನಾಯಕತ್ವ ಮತ್ತು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ, ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿಯಾದರು. ಎಲ್ಡಿಎಫ್ ಸಂಚಾಲಕರು, ವಿಪಕ್ಷ ನಾಯಕರು, ಸಿಎಂ ಆಗಿ ಅನೇಕ ಹುದ್ದೆಗಳನ್ನು ವಿ.ಎಸ್.ಅಚ್ಯುತಾನಂದನ್ ನಿರ್ವಹಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post