ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಮಂಗಲ ಬೆಳ್ಳಿಚಡವಿನಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಐಸರ್ ಲಾರಿಯನ್ನು ಬೆನ್ನಟ್ಟಿದ ಪೊಲೀಸರು ಪರಾರಿಯಾಗುತ್ತಿದ್ದ ಆರೋಪಿಯ ಕಾಲಿಗೆ ಗುಂಡು ಹಾರಿಸಿದ ಘಟನೆ ಇಂದು ನಸುಕಿನ ಜಾವ ನಡೆದಿದೆ. ಪೊಲೀಸರು 12 ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.
ಘಟನೆಯಲ್ಲಿ ಆರೋಪಿ ಲಾರಿ ಚಾಲಕ ಅಬ್ದುಲ್ಲಾ (40 ವರ್ಷ) ಕಾಲಿಗೆ ಗುಂಡೇಟು ತಗಲಿದೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಐಸರ್ ಲಾರಿಯಲ್ಲಿ ಸುಮಾರು 12 ಜಾನುವಾರುಗಳನ್ನು ಹಾಸನದಿಂದ ಕೇರಳಕ್ಕೆ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದು ಪೊಲೀಸರು ವಾಹನವನ್ನು ತಡೆಯಲು ಯತ್ನಿಸಿದಾಗ, ಆರೋಪಿಯು ವಾಹನ ನಿಲ್ಲಿಸಲು ನಿರಾಕರಿಸಿ ಸುಮಾರು 10 ಕಿಮೀ ದೂರವರೆಗೆ ಓಡಿಸಿದ್ದಾನೆ. ಆಗ ಪೊಲೀಸರು ಸುಮಾರು 10 ಕಿಮೀ ದೂರ ವಾಹನವನ್ನು ಬೆನ್ನಟ್ಟಿದ್ದಾರೆ.




ಲಾರಿಯನ್ನು ಅಡ್ಡಗಟ್ಟಿದ ಪೊಲೀಸ್ ಜೀಪಿಗೆ ಆರೋಪಿ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಆಗ ಸ್ಥಳದಲ್ಲಿದ್ದ ಪಿಎಸ್ಐ, ಆತ್ಮರಕ್ಷಣಾರ್ಥವಾಗಿ ಎರಡು ಸುತ್ತು ಗುಂಡು ಹಾರಿಸಿದ್ದು, ಒಂದು ವಾಹನದ ಮೇಲೆ ಹಾಗೂ ಮತ್ತೊಂದು ಆರೋಪಿಯ ಕಾಲಿಗೆ ಬಿದ್ದಿದೆ. ಘಟನೆಯ ಸಮಯದಲ್ಲಿ ಇನ್ನೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿ ಅಬ್ದುಲ್ಲಾ ಮೂಲತಃ ಕೇರಳದ ಕಾಸರಗೋಡಿನವನು. ಗಾಯಗೊಂಡ ಆರೋಪಿ ಅಬ್ದುಲ್ಲನನ್ನು ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋವುಗಳನ್ನು ಹಾಸನದಿಂದ ಕೇರಳಕ್ಕೆ ಸಾಗಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಲಾರಿಯಲ್ಲಿದ್ದ 10 ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಅಬ್ದುಲ್ಲಾ ವಿರುದ್ಧ ಈ ಹಿಂದೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ 33/2025 ಗೋ ಹತ್ಯೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
Discover more from Coastal Times Kannada
Subscribe to get the latest posts sent to your email.








Discussion about this post