ಮಂಗಳೂರು: ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಹೇಳಿದರು.
ನಗರದ ತುಳು ಅಕಾಡೆಮಿ ಸಿರಿ ಚಾವಡಿಯಲ್ಲಿ ಸೋಮವಾರ ತುಳು ಸಾಹಿತ್ಯ ಅಕಾಡೆಮಿ, ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಸತ್ಯ ಶಾಂತಾ ಪ್ರತಿಷ್ಠಾನಗಳ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಎನ್ನುವುದು ಕನ್ನಡಿಗರ ಧ್ವನಿ. ಕನ್ನಡ ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆ ಆಗುವಂತಹ ಘಟನೆಗಳನ್ನು ಸಾಹಿತ್ಯ ಪರಿಷತ್ ಖಂಡಿಸುತ್ತದೆ ಎಂದ ಅವರು, ಕರ್ನಾಟಕದಲ್ಲಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ರಾಜ್ಯ ಹಾಗೂ ಗಡಿ ಜಿಲ್ಲೆಗಳಲ್ಲಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವಿಶೇಷ ಕಾಳಜಿ ತೋರಬೇಕು ಎಂದು ಸಲಹೆ ನೀಡಿದರು.
ಉದ್ಘಾಟಿಸಿ ಮಾತನಾಡಿದ ತುಳು ಸಾಹಿತ್ಯಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್, ತುಳು ಅಕಾಡೆಮಿಗೆ ಅಧಿಕೃತ ಭಾಷಾ ಮಾನ್ಯತೆ ದೊರಕಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಅಕಾಡೆಮಿಗೆ ಅಗತ್ಯ ಸಹಕಾರ ನೀಡಬೇಕು. ತುಳು ಅಕಾಡೆಮಿಯು ಶೀಘ್ರದಲ್ಲಿ 15 ಪುಸ್ತಕಗಳನ್ನು ಪ್ರಕಟಿಸಲಿದೆ. ಅಲ್ಲದೇ ಯಕ್ಷಗಾನ, ಸಂಗೀತ, ನಾಟಕ, ಹರಿಕತೆ ಸೇರಿದಂತೆ ತುಳು ಭಾಷೆಯ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಅಕಾಡೆಮಿ ಹಮ್ಮಿಕೊಂಡು ಬರುತ್ತಿದೆ ಎಂದು ಮಾಹಿತಿ ನೀಡಿದರು.
ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಕಾಂತಿ ಶೆಟ್ಟಿ, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ನರೇಂದ್ರ ಕೆರೆಕಾಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜೇಶ್ ಜಿ., ಎಸ್.ಎಸ್. ನಾಯಕ್, ಪಿ.ವಿ. ಪ್ರದೀಪ್‌ಕುಮಾರ್, ಡಾ. ಸುರೇಶ ನೆಗಲಗುಳಿ ವೇದಿಕೆಯಲ್ಲಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post