ಮಂಗಳೂರು: ವಾಹನದ ದಾಖಲೆಗಳಲ್ಲಿರುವ ನಂಬರ್ ಒಂದು, ವಾಹನದಲ್ಲಿ ಅಳವಡಿಸಿರುವ ನಂಬರ್ ಇನ್ನೊಂದು… ಟೋಲ್‌ಗೇಟ್‌ನಲ್ಲಿ ದಾಖಲಾಗುವ ಫಾಸ್ಟ್‌ಟ್ಯಾಗ್‌ಗೆ ಹೊಂದಿಸಿದ ನಂಬರ್ ಒಂದು, ವಾಹನದ ಅಸಲಿನ ನಂಬರ್ ಪ್ಲೇಟ್‌ನಲ್ಲಿರುವ ನಂಬರ್ ಬೇರೊಂದು…! ಇಂಥ ಹಲವು ರೀತಿಯ “ನಂಬರ್ ಪ್ಲೇಟ್ ವಂಚನೆಗಳು’ ಪೊಲೀಸರನ್ನು ದಿಕ್ಕು ತಪ್ಪಿಸುತ್ತಿವೆ. ಅಪರಾಧ, ವಂಚನಾ ಕೃತ್ಯಕ್ಕೆ ಅಪರಾಧಿ ಗಳು ಬಳಸುವ ವಾಹನಗಳಲ್ಲಿ ಇದು ಸಾಮಾನ್ಯ.
ಒಂದೆಡೆ ನಂಬರ್‌ಪ್ಲೇಟ್ ಇಲ್ಲದ ವಾಹನಗಳು, ದೋಷ ಪೂರಿತ (ಅಕ್ಷರಗಳು ಅಸ್ಪಷ್ಟ, ಸಂಖ್ಯೆಗಳು ಅಸ್ಪಷ್ಟ, ಪ್ಲೇಟ್ ಮುರಿದಿರುವುದು ಇತ್ಯಾದಿ) ನಂಬರ್‌ಪ್ಲೇಟ್‌ಗಳನ್ನು ಹೊಂದಿರುವ ವಾಹನಗಳ ಹಾವಳಿಯಾದರೆ, ವಾಹನದಲ್ಲಿ ಅಳವಡಿಸಿರುವ ನಂಬರ್‌ಪ್ಲೇಟ್‌ಗೂ ಅದರ ನಿಜವಾದ ನಂಬರ್‌ಗೂ ಸಂಬಂಧ ಇಲ್ಲದೇ ಇರುವುದು ಮತ್ತೊಂದು ಬಗೆಯ ವಂಚನೆ. ಮಾತ್ರವಲ್ಲ, ಫಾಸ್ಟ್‌ಟ್ಯಾಗ್‌ನಲ್ಲಿ ಲಿಂಕ್ ಮಾಡಲಾದ ನಂಬರ್‌ಗೂ, ಇದಕ್ಕೂ ಸಂಬಂಧವೇ ಇಲ್ಲದಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ. ಇತ್ತೀಚಿನ ಕೋಟೆಕಾರು ಸಹಕಾರಿ ಬ್ಯಾಂಕ್‌ನಲ್ಲಿನ ಚಿನ್ನಾಭರಣ ದರೋಡೆಯ ಸಂದರ್ಭದಲ್ಲೂ ಇಂಥದ್ದೇ ನಕಲಿ ನಂಬರ್ ಪ್ಲೇಟ್ ಪೊಲೀಸರ ನಿದ್ದೆಗೆಡಿಸಿತ್ತು.
ಫಾಸ್ಟ್‌ಟ್ಯಾಗ್‌ಗೆ ಬೇರೆ ವಾಹನದ ಸಂಖ್ಯೆ ಕೊಡುವುದರ ಉದ್ದೇಶ ಅಪರಾಧ ಕೃತ್ಯದ ಸಂಚು ಆಗಿರುತ್ತದೆ ಎಂಬುದು ಪೊಲೀಸರ ಅನಿಸಿಕೆ. ಫಾಸ್ಟ್‌ಟ್ಯಾಗ್ ಮಾಡಿಸುವಾಗ ಬೇರೊಂದು ವಾಹನಗಳ ದಾಖಲೆಗಳನ್ನು ಬಳಸಲಾಗಿತ್ತೇ? ಎಂಬ ಶಂಕೆಯೂ ಇದೆ. ಇದಲ್ಲದೆ ಒಬ್ಬನೇ ಮಾಲಕರಲ್ಲಿ ಕಾರು, ಲಾರಿ ಅಥವಾ ಬೇರೆ ಘನ ವಾಹನಗಳಿದ್ದರೆ, ಲಾರಿ ಅಥವಾ ಬೇರೆ ವಾಹನಗಳಿಗೆ ಕಾರಿಗಿಂತ ಹೆಚ್ಚು ಟೋಲ್ ದರ ಇರುವುದರಿಂದ ಟೋಲ್ ದರ ಕಡಿಮೆ ಪಾವತಿಸಲು ಲಾರಿಗಳಿಗೆ ಕಾರಿನಂತಹ ವಾಹನಗಳ ಫಾಸ್ಟ್‌ಟ್ಯಾಗ್‌ನ್ನು ಹಾಕಿಕೊಳ್ಳುವ ಸಾಧ್ಯತೆಯೂ ಇರುತ್ತದೆ ಎನ್ನುತ್ತಾರೆ ಮಾಹಿತಿದಾರರು.
ಇನ್ನೂ ಕೆಲವು ಪ್ರಕರಣಗಳಲ್ಲಿ ವಾಹನಗಳು ಒಂದೇ ಆಗಿರುತ್ತದೆ. ಆದರೆ ನಕಲಿಯದ್ದಾಗಿರುತ್ತದೆ. ಉದಾಹರಣೆಗೆ ಕಾರು ಟೋಲ್‌ಗೇಟ್‌ನಲ್ಲಿ ಸಂಚರಿಸುವುಡಿಡಿದಾದರೆ ಇನ್ನೊಂದು ಕಾರಿನ ಫಾಸ್ಟ್ ಟ್ಯಾಗ್ ಅಳವಡಿಸಲಾಗಿರುತ್ತದೆ. ಇಂಥ ಸಂದರ್ಭಗಳಲ್ಲಿ ವಾಹನಗಳನ್ನು ಅಪರಾಧ ಕೃತ್ಯಗಳಿಗೆ ಬಳಸುವುದೇ ಹೆಚ್ಚು ಎನ್ನುತ್ತಾರೆ ಮಾಹಿತಿದಾರರು. ಈ ರೀತಿಯ ವಂಚನೆಗಳೂ ಬೆಳಕಿಗೆ ಬಂದ ಕಾರಣ ಪೊಲೀಸರು ಫಾಸ್ಟ್ ಟ್ಯಾಗ್ ಖಾತೆಗಳ ಮೇಲೆಯೂ ನಿಗಾ ವಹಿಸತೊಡಗಿದ್ದಾರೆ.
ಟಿಪ್ಪರ್‌ಗೆ ಕಾರಿನ ಫಾಸ್ಟ್‌ಟ್ಯಾಗ್ : ಪ್ರಕರಣವೊಂದರ ತನಿಖೆ ವೇಳೆ ಪೊಲೀಸರು ಕೆಲವು ಟೋಲ್‌ಗೇಟ್‌ಗಳಲ್ಲಿ ಮಾಹಿತಿ ಸಂಗ್ರಹಿಸಲು ಆರಂಭಿಸಿದಾಗ ಆಘಾತಕಾರಿ ಸಂಗತಿಗಳು ಬಯಲಾದವು. ಕಾರೊಂದರ ಬಗ್ಗೆ ಟೋಲ್‌ಗೇಟ್‌ನಲ್ಲಿ ದಾಖಲೆಗಳನ್ನು ನೋಡಿದಾಗ ಕಾರು ಟೋಲ್‌ನಲ್ಲಿ ಸಂಚರಿಸಿದ್ದು ಕಾಣಿಸಿತು. ಆದರೆ ಫಾಸ್ಟ್ ಟ್ಯಾಗ್ ನ ದಾಖಲೆಗಳಲ್ಲಿ ಆ ಕಾರಿನ ಬದಲು ಲಾರಿಯೊಂದರ ದಾಖಲೆಗಳು ಲಿಂಕ್ ಆಗಿದ್ದು ಬಯಲಾಯಿತು. ಇದು ಒಂದಲ್ಲ, ಹಲವಾರು ವಾಹನಗಳು ಬೇರೆ ವಾಹನಗಳ ನಂಬರ್‌ನ ಫಾಸ್ಟ್‌ಟ್ಯಾಗ್ ಅಳವಡಿಸಿ ಟೋಲ್‌ನಲ್ಲಿ ಸಂಚರಿಸಿರುವುದೂ ಗಮನಕ್ಕೆ ಬಂದಿದೆ.
‘ನಂಬರ್‌ಪ್ಲೇಟ್ ಹೊಂದಿರದ ಅಥವಾ ದೋಷಪೂರಿತ ನಂಬರ್‌ಪ್ಲೇಟ್ ಹೊಂದಿದ ವಾಹನಗಳ ವಿರುದ್ಧ 2023ರಲ್ಲಿ 4,081 ಪ್ರಕರಣ, 2024ರಲ್ಲಿ 5,043 ಹಾಗೂ 2025ರಲ್ಲಿ ಇದುವರಗೆ 225 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಫಾಸ್ಟ್ ಟ್ಯಾಗ್‌ನಲ್ಲಿ ವಂಚನೆ, ನಕಲಿ ನಂಬರ್ ಪ್ಲೇಟ್‌ಗಳನ್ನು ಹೊಂದಿರಬಹುದಾದ ವಾಹನಗಳ ಮೇಲೆಯೂ ಸೂಕ್ಷ್ಮನಿಗಾ ಇಡಲಾಗುತ್ತಿದೆ.’ –ನಜ್ಮಾ ಫಾರೂಕಿ, ಎಸಿಪಿ, ಮಂಗಳೂರು ಸಂಚಾರ ವಿಭಾಗ
Discover more from Coastal Times Kannada
Subscribe to get the latest posts sent to your email.
Discussion about this post