ಬಂಟ್ವಾಳ : ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಸಾಲುಮರದ ತಿಮ್ಮಕ್ಕ ಉದ್ಯಾನದ ಬಳಿ ಗಾಯಗೊಂಡು ನರಳುತ್ತಿದ್ದ ನಾಗರಹಾವೊಂದನ್ನು ರಕ್ಷಿಸಿ, ಅದರ ಹೊಟ್ಟೆಯೊಳಗೆ ಸೇರಿದ್ದ ಸುಣ್ಣದ ಡಬ್ಬವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ. 15 ದಿನಗಳ ಆರೈಕೆ ನಂತರ ಗುರುವಾರ ಹಾವನ್ನು ಕಾಡಿಗೆ ಬಿಡಲಾಗಿದೆ.
ಗಾಯಗೊಂಡ ನಾಗರಹಾವನ್ನು ಗಮನಿಸಿದ್ದ ಕಾವಳ ಪಡೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಸಂತಿ ಎಂಬುವರು ಜೂನ್ 6ರಂದು ಉರಗ ರಕ್ಷಕ ಸ್ನೇಕ್ ಕಿರಣ್ ಎಂಬುವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಸ್ನೇಕ್ ಕಿರಣ್ ಸ್ಥಳಕ್ಕೆ ಬಂದು ಹಾವನ್ನು ರಕ್ಷಿಸಿದಾಗ ಅದರ ಹೊಟ್ಟೆಯೊಳಗೆ ಗಟ್ಟಿ ವಸ್ತು ಇರುವುದನ್ನು ಗಮನಿಸಿದರು. ಹಾವನ್ನು ಪಶುವೈದ್ಯ ಮಂಗಳೂರಿನ ಡಾ.ಯಶಸ್ವಿ ನಾರಾವಿ ಅವರ ಬಳಿಗೆ ತೆಗೆದುಕೊಂಡು ಹೋಗಿ ಎಕ್ಸ್ ರೇ ತೆಗೆದು ನೋಡಿದಾಗ ಹಾವಿನ ಹೊಟ್ಟೆಯೊಳಗೆ ಸುಣ್ಣದ ಪ್ಲಾಸ್ಟಿಕ್ ಡಬ್ಬ ಇರುವುದು ಪತ್ತೆಯಾಗಿದೆ.
ಡಾ. ಯಶಸ್ವಿ ಪ್ರಕಾರ ‘ಸುಮಾರು ಐದು ಅಡಿ ಉದ್ದದ ಹೆಣ್ಣು ನಾಗರಹಾವು ಇದಾಗಿತ್ತು. 10 ವರ್ಷ ಪ್ರಾಯ ಆಗಿರಬಹುದು. ಹಾವು ಮೊಟ್ಟೆ ನುಂಗುವ ವೇಳೆ ಸುಣ್ಣದ ಡಬ್ಬವನ್ನು ಒಟ್ಟಿಗೆ ನುಂಗಿದ್ದಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ 15 ದಿನಗಳ ಕಾಲ ಶುಶ್ರೂಷೆ ಒದಗಿಸಿ ಯಾವುದೇ ತೊಂದರೆ ಇಲ್ಲವೆಂದು ಕಂಡ ಬಳಿಕ ಸ್ನೇಕ್ ಕಿರಣ್ ಅರಣ್ಯ ಇಲಾಖೆಯ ಮಾರ್ಗದರ್ಶನದಂತೆ ಮತ್ತೆ ಹಾವನ್ನು ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post