ಮಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರು ನಡೆಸಲು ಕರೆದೊಯ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಅಡ್ಯಾರ್‌ನ ಮಿಷ್ತಾ ಅಲಿಯಾಸ್ ಮಹಮ್ಮದ್ ಮುಷ್ತಾಕ್ (26) ಎಂಬಾತನ ಮೇಲೆ ಮಂಗಳೂರು ಗ್ರಾಮಾಂತರ ಠಾಣೆಯ ಪಿಎಸ್‌ಐ ವಿನಾಯಕ ಬಾವಿಕಟ್ಟೆ ಅವರು ಸೋಮವಾರ ಕಂಬಳ ಗ್ರಾಮದಲ್ಲಿ ಗುಂಡು ಹಾರಿಸಿದ್ದಾರೆ. ಗುಂಡೇಟು ತಗುಲಿದ ಆರೋಪಿಯ ಎಡಗಾಲಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ನಗರದ ಕಂಕನಾಡಿಯ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯಿಂದ ಹಲ್ಲೆಗೊಳಗಾದ ಮಂಗಳೂರು ಗ್ರಾಮಾಂತರ ಠಾಣೆಯ ಕಾನ್‌ಸ್ಟೆಬಲ್ ಸದ್ದಾಂ ಹುಸೇನ್ ಅವರೂ ಗಾಯಗೊಂಡಿದ್ದಾರೆ. ಆರೋಪಿ ಮಿಷ್ತಾ ತನ್ನ ಗೆಳೆಯ ಆಶೀಕ್ ಜೊತೆ ಸೇರಿ ಇದೇ 19ರಂದು ರಾತ್ರಿ ವಳಚ್ಚಿಲ್‌ನ ಬದ್ರಿಯಾ ಮಸೀದಿ ಬಳಿ ವಿದ್ಯಾರ್ಥಿ ಯೂಸುಫ್ ಮಿರ್ಷಾದ್ ಅವರ ಸಹೋದರ ರಮ್ಲಾನ್ ಮಿಫ್ತ ಅವರ ಮೊಬೈಲ್ ಕಿತ್ತುಕೊಂಡಿದ್ದ. ಯೂಸುಫ್ ಮಿರ್ಷಾದ್ ಹಾಗೂ ಅವರ ಮಾವ ರಮ್ಲಾನ್ ಆಸಿಫ್ ಅವರು ಸ್ಥಳಕ್ಕೆ ತೆರಳಿ ಮೊಬೈಲ್ ಮರಳಿಸುವಂತೆ ಕೇಳಿದ್ದರು. ಆಗ ಅವರ ಜೊತೆ ಜಗಳವಡಿದ್ದ ಮಿಷ್ತಾ ಡ್ರ್ಯಾಗರ್‌ನಿಂದ ರಮ್ಲಾನ್ ಆಸಿಫ್ ಅವರಿಗೆ ಹಲ್ಲೆ ನಡೆಸಿದ್ದ. ಅವರ ಕಿವಿಯಿಂದ ಒಳಹೊಕ್ಕ ಡ್ರ್ಯಾಗರ್ ಬಾಯಿಯಲ್ಲಿ ಹೊರಗೆ ಬಂದಿತ್ತು. ಅವರ ಎದೆಗೂ ಗಾಯಗಳಾಗಿತ್ತು. ಆರೋಪಿ ಮಿಷ್ತಾನನ್ನು ಪೊಲೀಸರು ಬಂಧಿಸಿದ್ದರು.
‘ಸ್ಥಳ ಮಹಜರು ನಡೆಸಲು, ಕೃತ್ಯಕ್ಕೆ ಬಳಸಿದ ಆಯುಧ ಮತ್ತು ವಾಹನ ವಶಪಡಿಸಿಕೊಳ್ಳಲು ಆರೋಪಿಯನ್ನು ಸಂಜೆ 4.30ರ ಸುಮಾರಿಗೆ ಘಟನೆ ನಡೆದ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಆಗ ಆತ ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಗ್ರಾಮಾಂತರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ವಿನಾಯಕ ಬಾವಿಕಟ್ಟೆ ಅವರು ಮೂರು ಸುತ್ತಿನ ಗುಂಡು ಹಾರಿಸಿದ್ದರು. ಒಂದು ಗುಂಡು ಆರೋಪಿಯ ಕಾಲಿಗೆ ತಾಗಿದ್ದರಿಂದ ಆತ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ’ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸುದ್ದಿಗಾರರಿಗೆ ತಿಳಿಸಿದರು. ‘ಆರೋಪಿ ಮಿಷ್ತಾ ವಿರುದ್ಧ ಈ ಹಿಂದೆಯೂ ಕೊಲೆ ಯತ್ನ, ದರೋಡೆ ಮತ್ತು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಮಲ್ಪೆ, ಕೊಣಾಜೆ ಠಾಣೆಗಳಲ್ಲೂ ಈತನ ವಿರುದ್ಧ ಪ್ರಕರಣಗಳು ದಾಖಲಾದ ಮಾಹಿತಿ ಇದೆ. ಆರೋಪಿಯು ಅಡ್ಯಾರ್ ಪರಿಸರದಲ್ಲಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ. ಗಾಂಜಾ ಸೇವಿಸಿ ರಾತ್ರಿ ವೇಳೆ ಜನರಿಗೆ ಡ್ರ್ಯಾಗರ್ ತೋರಿಸಿ ಬೆದರಿಸಿದ ದೂರುಗಳಿವೆ. ಆರೋಪಿಯಿಂದ ಕಿರುಕುಳ ಅನುಭವಿಸಿದ್ದ ಅನೇಕರು ಭಯದಿಂದ ದೂರು ನೀಡಲು ಹಿಂದೇಟು ಹಾಕಿದ್ದರು. ಆರೋಪಿಯು ಪ್ರಕರಣವೊಂದರಲ್ಲಿ ಈ ಹಿಂದೆಯೂ ಬಂಧಿತನಾಗಿದ್ದ. ಜಾಮೀನಿನ ಮೇಲೆ ಬಿಡುಗಡೆ ಆದ ಬಳಿಕವೂ ಅಪರಾಧ ಕೃತ್ಯಗಳನ್ನು ಮುಂದುವರಿಸಿದ್ದ’ ಎಂದು ಅವರು ಮಾಹಿತಿ ನೀಡಿದರು. ಅಡ್ಯಾರ್ ಪ್ರದೇಶದಲ್ಲಿ ಗಾಂಜಾ ಹಾವಳಿ ಜಾಸ್ತಿ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್, ‘ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಗಾಂಜಾ ಹಾವಳಿ ತಡೆಯಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ. ಇದು ಗಡಿ ಪ್ರದೇಶವಾಗಿರುವುದರಿಂದ ಹೊರರಾಜ್ಯಗಳಿಂದ ಗಾಂಜಾ ಪೂರೈಕೆ ತಡೆಯಲು ತಪಾಸಣೆ ಹೆಚ್ಚಿಸಿದ್ದೇವೆ’ ಎಂದರು.
Discover more from Coastal Times Kannada
Subscribe to get the latest posts sent to your email.
Discussion about this post