ಧರ್ಮಸ್ಥಳ ಪ್ರದೇಶದ ಸುತ್ತಮುತ್ತಲಿನ ಹಲವು ಕಡೆಗಳಲ್ಲಿ ಅಕ್ರಮವಾಗಿ ಮೃತದೇಹ ಹೂತು ಹಾಕಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರನನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳು ಶನಿವಾರ ಬಂಧಿಸಿದ್ದರು. ಆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸದ್ಯ ಆತನನ್ನು ವಿಚಾರಣೆ ನಡೆಸಿದ ಬೆಳ್ತಂಗಡಿಯ ನ್ಯಾಯಾಲಯವು, ಹೆಚ್ಚಿನ ತನಿಖೆಗಾಗಿ 10 ದಿನಗಳ ಕಾಲ ಆತನನ್ನು ಎಸ್‌ಐಟಿ ವಶಕ್ಕೆ ನೀಡಿರುವುದಾಗಿ ವರದಿಯಾಗಿದೆ.
ನ್ಯಾಯಾಲಯಕ್ಕೆ ಹಾಜರುಪಡಿಸುವುದಕ್ಕೂ ಮುನ್ನ ದೂರುದಾರರನ್ನು ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಎಸ್‌ಐಟಿ ಅಧಿಕಾರಿಗಳು, ವೈದ್ಯಕೀಯ ತಪಾಸಣೆ ನಡೆಸಿದ್ದರು. ಈವರೆಗೆ ಮಾಸ್ಕ್ ಧರಿಸಿಕೊಂಡಿದ್ದ ಸಾಕ್ಷಿ ದೂರುದಾರನ ಬಂಧನವಾಗುತ್ತಿದಂತೆಯೇ ಹೆಸರು, ಊರು, ವಿವರ ಸೇರಿದಂತೆ ಫೋಟೋ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ. ದೂರುದಾರ ಆಗಿದ್ದ ಆರೋಪಿ ಮಂಡ್ಯ ಜಿಲ್ಲೆಯ ಮಂಡ್ಯ ತಾಲೂಕಿನ ಚಿಕ್ಕಬೆಳ್ಳಿ ನಿವಾಸಿ. ಆತನ ಹೆಸರು ಸಿ.ಎನ್.ಚಿನ್ನಯ್ಯ ಯಾನೆ ಚೆನ್ನ ಎಂದು ಮಾಹಿತಿ ಸದ್ಯ ಹರಿದಾಡಿದೆ.
ಬಂಧಿತ ಮಾಸ್ಕ್‌ಮ್ಯಾನ್ ಸಿಎನ್ ಚಿನ್ನಯ್ಯ ಯಾರು? : ಸಾಕ್ಷಿದಾರನಾಗಿ ಬಂದಿದ್ದ ಅನಾಮಿಕ ಮಾಸ್ಕ್ಮ್ಯಾನ್ನನ್ನು ಇದೀಗ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಸಿಎನ್ ಚಿನ್ನಯ್ಯ ಅಲಿಯಾಸ್ ಚೆನ್ನ ಬಂಧಿತ ಆರೋಪಿ. ಈ ಮಾಸ್ಕ್‌ಮ್ಯಾನ್ ಯಾರು, ಎಲ್ಲಿಯವನು ಎಂದು ಸಾಕಷ್ಟು ಚರ್ಚೆಗಳು ನಡೆದಿದ್ದವು. ಸ್ವತಃ ಎಸ್ಐಟಿ ಅಧಿಕಾರಿಗಳು ದಾಖಲೆ ಸಮೇತ ಈತ ಮಂಡ್ಯದ ಚಿಕ್ಕಬಳ್ಳಿ ಗ್ರಾಮದವನು ಎಂದು ಬಯಲು ಮಾಡಿದ್ದಾರೆ.
ಇನ್ನು ಮಾಸ್ಕ್‌ಮ್ಯಾನ್ ಹುಟ್ಟಿ ಬೆಳೆದಿದ್ದು ನಮ್ಮ ಗ್ರಾಮದಲ್ಲೇ, ಆತ ಹುಟ್ಟು ಸೋಮಾರಿ ಎಂದು ಮಂಡ್ಯ ಜಿಲ್ಲೆಯ ಚಿಕ್ಕಬಳ್ಳಿ ಗ್ರಾಮದ ನಿಂಗರಾಜು ಮತ್ತು ಶಂಕರೇಗೌಡ ಎಂಬುವವರು ಟಿವಿ9ಗೆ ಹೇಳಿಕೆ ನೀಡಿದ್ದರು. ದೂರುದಾರ ಮಂಡ್ಯ ಮೂಲದವನು. ಹುಟ್ಟಿ ಬೆಳೆದಿದ್ದು ನಮ್ಮ ಗ್ರಾಮದಲ್ಲೇ. ಆತ ಧರ್ಮಾಧಿಕಾರಿ ಬಗ್ಗೆ ಹೇಳುತ್ತಿರುವುದು ಸುಳ್ಳು ಎಂದಿದ್ದರು. ಮುಸುಕುಧಾರಿಯ ಮೊದಲ ಪತ್ನಿ ಇತ್ತೀಚೆಗೆ ಮಾಧ್ಯಮದ ಎದುರು ಬಂದು ಧರ್ಮಸ್ಥಳದಲ್ಲಿದ್ದಾಗ ಆತ ಹೇಳಿದಂತೆ ಯಾವುದೇ ಘಟನೆಗಳು ನಡೆದಿಲ್ಲ ಅಂತಾ ಸ್ಫೋಟಕ ಹೇಳಿಕೆ ನೀಡಿದ್ದರು. ಮಂಡ್ಯದವರೇ ಆದ ಇವರನ್ನ ಮದುವೆಯಾಗಿ 7 ವರ್ಷ ಸಂಸಾರ ಮಾಡಿದ್ದ. ಮದುವೆ ಬಳಿಕ ಧರ್ಮಸ್ಥಳದ ನೇತ್ರಾವತಿಯಲ್ಲಿ 7 ವರ್ಷ ಇದ್ದೆವು ಎಂದಿದ್ದರು. ಧರ್ಮಸ್ಥಳದಲ್ಲೇ ಈತನಿಗೆ ತಮಿಳುನಾಡು ಮೂಲದ ಮತ್ತೊಬ್ಬಳ ಜೊತೆಗೆ ಅಫೇರ್ ಶುರುವಾಗಿತ್ತಂತೆ ಆಕೆಯನ್ನ 2ನೇ ಮದುವೆ ಆಗಲು ಪತ್ನಿಗೆ ಚಿತ್ರಹಿಂಸೆ ಕೊಟ್ಟು ಮನೆಯಿಂದ ಓಡಿಸಿದ್ದಂತೆ. ಹಣಕ್ಕಾಗಿಯೇ ಈ ರೀತಿ ಮಾಡುತ್ತಿರಬಹುದು ಅಂತಾ ಮಾಸ್ಕ್‌ಮ್ಯಾನ್ ಮೊದಲ ಪತ್ನಿ ಆರೋಪಿಸಿದ್ದರು.
ಸದ್ಯ ಎಸ್ಐಟಿಯಿಂದ ಮಾಸ್ಕ್‌ಮ್ಯಾನ್ ಚಿನ್ನಯ್ಯನನ್ನು ಬಂಧಿಸಿ ವಿಚಾರಣೆ ಮಾಡಿದ್ದು, ಈ ವೇಳೆ ಎರಡು ವರ್ಷ ತಮಿಳುನಾಡಿನ ಈರೋಡ್ನ ಚಿಕ್ಕರಸಿನಪಾಳ್ಯದಲ್ಲಿ ಇದಿದ್ದಾಗಿ ಹೇಳಿಕೆ ನೀಡಿದ್ದಾನೆ. ಬಳಿಕ ಮತ್ತೆ ಉಜಿರೆಗೆ ಬಂದು ಪಂಚಾಯತ್ನ ಸಫಾಯಿ ಕರ್ಮಚಾರಿ ಕೆಲಸಕ್ಕೆ ಸೇರಿದ್ದ. ಅಲ್ಲಿ ಜಯಂತ್ ಟಿ ಪರಿಚಯ ಆದ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಪ್ರಕರಣದಲ್ಲಿ ಅನಾಮಿಕ ದೂರುದಾರನನ್ನು ಸಾಕ್ಷಿದಾರನನ್ನಾಗಿ ಪರಿಗಣಿಸಲಾಗಿತ್ತು. ಹೀಗಾಗಿ, ಸಾಕ್ಷ್ಯ ಸಂರಕ್ಷಣಾ ಕಾಯ್ದೆಯಡಿ ಆತನನ್ನು ರಕ್ಷಣೆ ಮಾಡಲಾಗುತ್ತಿತ್ತು. ಆದರೆ ಎಸ್ಐಟಿ ಅಧಿಕಾರಿಗಳ ಸತತ ವಿಚಾರಣೆ ಈತನ ಬಂಡವಾಳ ಬಯಲು ಮಾಡಿದೆ. ಬಳಿಕ ಆತನನ್ನು ಬಂಧಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post