ತಿರುವನಂತಪುರಂ ಸೆಪ್ಟೆಂಬರ್ 23: ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಜಾರಿ ನಿರ್ದೇಶನಾಲಯ ( E.D ) ಅಧಿಕಾರಿಗಳು ಗುರುವಾರ (ಸೆ. 22) ಕೇರಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ( PFI ) ಮೇಲೆ ದಾಳಿ ಮತ್ತು ಅದರ ನಾಯಕರ ಬಂಧನ ಖಂಡಿಸಿ ಶುಕ್ರವಾರ ಕರೆ ನೀಡಿದ್ದ ಬಂದ್ ಹಿಂಸಾಚಾರಕ್ಕೆ ತಿರುಗಿದೆ. ರಾಜ್ಯಾದ್ಯಂತ ಹಲವಾರು ವಿಧ್ವಂಸಕ ಮತ್ತು ಹಿಂಸಾಚಾರದ ಘಟನೆಗಳು ವರದಿಯಾಗಿವೆ ಮತ್ತು ತಿರುವನಂತಪುರಂ, ಕೊಲ್ಲಂ, ಕೋಝಿಕ್ಕೋಡ್, ವಯನಾಡ್ ಮತ್ತು ಆಲಪ್ಪುಳದಂತಹ ವಿವಿಧ ಜಿಲ್ಲೆಗಳಲ್ಲಿ ಕಲ್ಲು ತೂರಾಟ ನಡೆಸಲಾಗಿದೆ.ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ ನಂತರ, ಕೇರಳ ಹೈಕೋರ್ಟ್ ಈ ಹಿಂದೆ ನ್ಯಾಯಾಲಯವು ನಿಷೇಧಿಸಿದ್ದ ರಾಜ್ಯದಲ್ಲಿ ಹರತಾಳಕ್ಕೆ ಕರೆ ನೀಡಲಾಗಿದೆ. ನಡೆಯುತ್ತಿರುವ ಪ್ರತಿಭಟನೆ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಫ್ಲ್ಯಾಶ್ ಪ್ರತಿಭಟನೆ ಎಂದರೆ, ಪೂರ್ವ ಸೂಚನೆ ನೀಡದೆ ಕರೆದಿರುವ ಮುಷ್ಕರಗಳು. ಹಾಗಾಗಿ ಕನಿಷ್ಠ ಏಳು ದಿನಗಳ ಮುಂಚಿತವಾಗಿ ಸೂಚನೆ ನೀಡಿದ ನಂತರ ಹರತಾಳಕ್ಕೆ ಕರೆ ನೀಡಬೇಕು ಎಂದು ಕೇರಳ ಹೈಕೋರ್ಟ್ ಹೇಳಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇಂದು ಕರೆ ನೀಡಿರುವ ರಾಜ್ಯವಾರು ಬಂದ್‌ಗೆ ಬೆಂಬಲ ನೀಡಿದ ಜನರಿಂದ ಒಂದು ಆಟೋ ರಿಕ್ಷಾ ಮತ್ತು ಕಾರಿಗೆ ಹಾನಿಯಾಗಿದೆ. ಜೊತೆಗೆ ಆಲುವಾ ಸಮೀಪದ ಕಂಪನಿಪಾಡಿಯಲ್ಲಿ ಇಂದು ಪಿಎಫ್‌ಐ ಕರೆ ನೀಡಿರುವ ಒಂದು ದಿನದ ಬಂದ್‌ಗೆ ಬೆಂಬಲ ನೀಡಿದ ಜನರು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ (KSRTC) ಅನ್ನು ಧ್ವಂಸಗೊಳಿಸಿದ್ದಾರೆ.
ಹಿಂಸಾಚಾರಕ್ಕೆ ತಿರುಗಿದ ಪಿಎಫ್‌ಐನ ಬಂದ್ : ಮಾತ್ರವಲ್ಲದೆ ಕಣ್ಣೂರಿನ ನಾರಾಯಣಪಾರಾದಲ್ಲಿ ಬೆಳಗ್ಗೆ ಪತ್ರಿಕೆಗಳನ್ನು ವಿತರಿಸಲು ಸಾಗಿಸುತ್ತಿದ್ದ ವಾಹನದ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಲಪ್ಪುಳದಲ್ಲಿ ಹರತಾಳಕ್ಕೆ ಬೆಂಬಲ ನೀಡಿದವರು ಕಲ್ಲು ತೂರಾಟ ನಡೆಸಿದ್ದು, ಕೆಎಸ್‌ಆರ್‌ಟಿಸಿ ಬಸ್‌ಗಳು, ಟ್ಯಾಂಕರ್ ಲಾರಿ ಮತ್ತು ಇತರ ಕೆಲವು ವಾಹನಗಳು ಜಖಂಗೊಂಡಿವೆ. ಕೋಝಿಕ್ಕೋಡ್ ಮತ್ತು ಕಣ್ಣೂರಿನಲ್ಲಿ ಪಿಎಫ್‌ಐ ಕಾರ್ಯಕರ್ತರು ನಡೆಸಿದ ಕಲ್ಲು ತೂರಾಟದಲ್ಲಿ ಕ್ರಮವಾಗಿ 15 ವರ್ಷದ ಬಾಲಕಿ ಮತ್ತು ಆಟೋ ರಿಕ್ಷಾ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪಿಟಿಐ ವರದಿ ಮಾಡಿದೆ.
ಇಬ್ಬರು ಪೊಲೀಸರು ಆಸ್ಪತ್ರೆಗೆ ದಾಖಲು : ಕೊಲ್ಲಂನಲ್ಲಿ ಪಿಎಫ್‌ಐ ಬೆಂಬಲಿಗರ ದಾಳಿಯಿಂದ ಆಂಟನಿ ಮತ್ತು ನಿಖಿಲ್ ಎಂದು ಗುರುತಿಸಲಾದ ಇಬ್ಬರು ಸಿವಿಲ್ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ದೌರ್ಜನ್ಯ ನಡೆಸುತ್ತಿರುವಾಗ ಅವರನ್ನು ಪೊಲೀಸರು ತಡೆಯಲು ಮುಂದಾದಾಗ ಪೊಲೀಸರನ್ನು ಬಲವಾಗಿ ತಳ್ಳಿದ್ದಾರೆ. ಇದೀಗ ಇಬ್ಬರು ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೈಕ್ ನಂಬರ್ ಗುರುತಿಸಲಾಗಿದ್ದು, ಆರೋಪಿಯನ್ನು ಶೀಘ್ರವೇ ವಶಕ್ಕೆ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೇರಳ ಪೊಲೀಸರು ರಾಜ್ಯದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಪಿಎಫ್‌ಐ ಒಂದು ದಿನದ ರಾಜ್ಯವ್ಯಾಪಿ ಹರ್ತಾಲ್‌ಗೆ ಕರೆ ನೀಡಿದ ನಂತರ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನಗಳನ್ನು ನೀಡಲಾಗಿದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯದ ಎಲ್ಲ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post