ಕಾಸರಗೋಡು, ಸೆ.22: ಮನೆಯೊಂದರಲ್ಲಿ ಬಚ್ಚಿಡಲಾಗಿದ್ದ ಎಂಡಿಎಂಎ ಡ್ರಗ್ಸ್, ಕೊಕೇನ್ ಸೇರಿದಂತೆ ಸುಮಾರು 3.5 ಕೋಟಿ ಮೌಲ್ಯದ ಬೃಹತ್ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಲಾಗಿದ್ದು, ಉಪ್ಪಳ ಪತ್ವಾಡಿ ನಿವಾಸಿ ಅಮೀರ್ ಎಂಬವರ ಪುತ್ರ ಅಸ್ಕರ್ ಆಲಿ(30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧಾರದಲ್ಲಿ ಮಂಜೇಶ್ವರ ತಾಲೂಕಿನ ಉಪ್ಪಳ ಕೊಂಡೆವೂರಿನ ಪತ್ವಾಡಿಯ ಎರಡು ಮಹಡಿಯ ಮನೆಯೊಂದಕ್ಕೆ ದಾಳಿ ನಡೆಸಿದ ಕಾಸರಗೋಡು ಪೊಲೀಸರು ಮನೆಯೊಳಗೆ ಇಡಲಾಗಿದ್ದ 3.4 ಕೇಜಿ ಎಂಡಿಎಂಎ, 96 ಗ್ರಾಮ್ ಕೊಕೇನ್, 640 ಗ್ರಾಮ್ ಗಾಂಜಾ, 30ರಷ್ಟು ಡ್ರಗ್ಸ್ ಮಾತ್ರೆಗಳನ್ನು ವಶಪಡಿಸಿದ್ದಾರೆ. ಬಂಧಿತ ಆರೋಪಿ ಅಸ್ಕರ್ ಆಲಿ ಬೆಂಗಳೂರಿನಿಂದ ಬೃಹತ್ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ಕಾಸರಗೋಡಿಗೆ ತಂದು ಗ್ರಾಹಕರಿಗೆ ಪೂರೈಸಲು ಸಂಗ್ರಹಿಸಿಟ್ಟಿದ್ದ. ಪ್ರಕರಣದಲ್ಲಿ ಇನ್ನೂ ಅನೇಕ ಆರೋಪಿಗಳಿದ್ದು, ತನಿಖೆ ಮುಂದುವರಿಸಲಾಗಿದೆ.
ಆಗಸ್ಟ್ 30ರಂದು ಕೇರಳದ ಮೇಲ್ಪರಂಬದ ಕೈನೋತ್ ಎಂಬಲ್ಲಿ ಎಂಡಿಎಂಎ ಡ್ರಗ್ಸ್ ಜೊತೆಗೆ ಚಿಕ್ಕಮಗಳೂರು ಮೂಡಿಗೆರೆ ನಿವಾಸಿ ಅಬ್ದುಲ್ ರಹಮಾನ್ ಯಾನೆ ಬಿ.ಇ ರವಿ (28) ಎಂಬಾತನನ್ನು ಬಂಧಿಸಲಾಗಿತ್ತು. ಆತನ ಮಾಹಿತಿಯಂತೆ ಉಪ್ಪಳದ ಮನೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಅಸ್ಕರ್ ಆಲಿ ಮತ್ತು ಇತರರು ಈ ಮನೆಯನ್ನು ಡ್ರಗ್ಸ್ ಸಂಗ್ರಹಿಸಿಡುವುದಕ್ಕಾಗಿಯೇ ಬಳಕೆ ಮಾಡಿದ್ದರು. ಆ ಮನೆಗೆ ಕೆಲವೊಮ್ಮೆ ಮಾತ್ರ ಬಂದು ಹೋಗುತ್ತಿದ್ದು, ಉಳಿದಂತೆ ಅಲ್ಲಿ ಕುಟುಂಬಸ್ಥರು ವಾಸ ಇರಲಿಲ್ಲ. ಹೀಗಾಗಿ ಆಸುಪಾಸಿನ ಮನೆಯವರಲ್ಲಿ ಈ ಬಗ್ಗೆ ಕುತೂಹಲವೂ ಇತ್ತು. ಡ್ರಗ್ಸ್ ಪತ್ತೆಯಾಗಿದೆ ಎನ್ನುವ ಮಾಹಿತಿ ತಿಳಿದು ನೂರಾರು ಜನರು ಸ್ಥಳದಲ್ಲಿ ಸೇರಿದ್ದರು.
ಆರೋಪಿ ಅಸ್ಕರ್ ಆಲಿ ಕೆಲವು ವರ್ಷಗಳ ಹಿಂದೆ ಯುವಕರರೊಂದಿಗೆ ಸೇರಿ ಮನಿ ಚೈನ್ ಲಿಂಕ್ ಮಾಡಿದ್ದು ಅದರಲ್ಲಿ ಹಣ ಕಳಕೊಂಡಿದ್ದ. ಆನಂತರ, ಡ್ರಗ್ಸ್ ವಹಿವಾಟಿನಲ್ಲಿ ತೊಡಗಿಸಿದ್ದ ಎನ್ನಲಾಗುತ್ತಿದೆ. ಈತನ ತಂದೆ ಲಂಡನ್ ಮೂಲದ ಕಂಪನಿಯಲ್ಲಿ ಕೆಲಸಕ್ಕಿದ್ದರು. ಮೂರು ವರ್ಷಗಳ ಹಿಂದೆ ಅಸೌಖ್ಯದ ಕಾರಣಕ್ಕೆ ಊರಿಗೆ ಬಂದಿದ್ದರು. ಆನಂತರ, ಅಸ್ಕರ್ ಕಿರಿಯ ಸೋದರ ಅಲ್ಲಿಗೆ ತೆರಳಿದ್ದು ಉದ್ಯೋಗಕ್ಕೆ ಸೇರಿದ್ದ. ಅಸ್ಕರ್ ಆಲಿ ದೊಡ್ಡ ಮಟ್ಟದಲ್ಲಿ ಡ್ರಗ್ಸ್ ವಹಿವಾಟು ನಡೆಸುತ್ತಿದ್ದು, ಹಲವರು ಈ ದಂಧೆಯಲ್ಲಿ ತೊಡಗಿರುವ ಸಾಧ್ಯತೆಯಿದೆ. ಆತನಿಗೆ ಸೇರಿದ ಮನೆ, ಬ್ಯಾಂಕ್ ಖಾತೆ, ವಾಹನಗಳನ್ನು ಮುಟ್ಟುಗೋಲು ಹಾಕಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Discover more from Coastal Times Kannada
Subscribe to get the latest posts sent to your email.








Discussion about this post