ಬೆಳ್ತಂಗಡಿ: ನಿಲ್ಲಿಸಿದ್ದ ಬೈಕ್ ಕಳವು ಮಾಡಿದ ಪ್ರಕರಣವನ್ನು ವೇಣೂರು ಪೊಲೀಸರು ಪತ್ತೆ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ವೇಣೂರು ಗ್ರಾಮದ ಕೆರೆಕೋಡಿ ನಿವಾಸಿ ಮಹಮ್ಮದ್ ಇರ್ಷಾದ್ (25) ಮತ್ತು ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ನಿವಾಸಿ ಸಾದಿಕ್ ಖಾನ್ (26) ಆರೋಪಿಗಳು.
ನ.11ರಂದು ರಾತ್ರಿ ಕುಕ್ಕೇಡಿ ನಿವಾಸಿ ಸಂಪತ್ ಕುಮಾರ್ ಅವರು ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ನಿಟ್ಟಡೆ ಗ್ರಾಮದ ಪಾಣೂರು ಗುರುನಾರಾಯಣ ಸರ್ಕಲ್ ಬಳಿ ಬೈಕ್ ನಿಲ್ಲಿಸಿ ಹೋಗಿದ್ದರು. ನ.12ರಂದು ಬಂದು ನೋಡಿದಾಗ ಬೈಕ್ ಇರಲಿಲ್ಲ. ಈ ಬಗ್ಗೆ ನ.13ರಂದು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ವೇಣೂರು ಪಿಎಸ್‌ಐ ಓಮನ ಮತ್ತು ಸಿಬ್ಬಂದಿ ನ.20ರಂದು ವೇಣೂರು ಗ್ರಾಮದ ಕೆರೆಕೋಡಿಯಲ್ಲಿ ಕರ್ತವ್ಯದ ವೇಳೆ ಇಬ್ಬರು ಯುವಕರು ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಬರುತ್ತಿದ್ದಾಗ ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ಯಾವುದೇ ದಾಖಲೆಗಳು ಇರಲಿಲ್ಲ. ಬೈಕ್ ವಶಕ್ಕೆ ಪಡೆದುಕೊಂಡು ಇಬ್ಬರನ್ನು ವಿಚಾರಣೆ ನಡೆಸಿದಾಗ ಗುರುನಾರಾಯಣ ಸರ್ಕಲ್ ಬಳಿ ನಿಲ್ಲಿಸಿದ ಬೈಕ್ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳಲ್ಲಿ ಇರ್ಷಾದ್ ಮೇಲೆ ವೇಣೂರು ಪೊಲೀಸ್ ಠಾಣೆಯಲ್ಲಿ ಮತ್ತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಗಾಂಜಾ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಶುಕ್ರವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇಬ್ಬರಿಗೂ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಡಿವೈಎಸ್ಪಿ ರೋಹಿಣಿ ಸಿಕೆ ನಿರ್ದೇಶನ ಮತ್ತು ವೃತ್ತ ನಿರೀಕ್ಷಕ ಬಿ.ಜಿ.ಸುಬ್ಬಾಪುರ ಮಠ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ವೇಣೂರು ಪೊಲೀಸ್ ತಂಡದಲ್ಲಿ ಸಬ್-ಇನ್ಸ್‌ಪೆಕ್ಟರ್ ಅಕ್ಷಯ್ ಡವಗಿ, ಎಎಸ್‌ಐ ವೆಂಕಟೇಶ್ ನಾಯಕ್, ಎಚ್‌ಸಿ 405 ಕೃಷ್ಣ, ಎಂಎಚ್‌ಸಿ 913 ಕೇಶವತಿ, ಪಿಸಿ 2466 ಬಸವರಾಜ್ ಮತ್ತು ಪಿಸಿ 434 ಮೋಹನ್ ಇದ್ದರು.
Discover more from Coastal Times Kannada
Subscribe to get the latest posts sent to your email.







Discussion about this post