ಬೆಂಗಳೂರು: ಸಾಮರಸ್ಯದ ಕೊಂಡಿ ಬೆಸೆಯುವ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ‘ಬಹಿಷ್ಕಾರ’ ಹಾಕುವ ರೀತಿಯೊಳಗೆ ಉಡುಪಿಯಲ್ಲಿ ಆರಂಭವಾದ ಹೊಸ ಚಾಳಿ ರಾಜ್ಯದ ಹಲವು ಜಿಲ್ಲೆಗಳಿಗೆ ಬುಧವಾರ ಹರಡಿದೆ. ಎರಡು ಕೋಮುಗಳ ಮಧ್ಯೆ ಕಂದಕ ಸೃಷ್ಟಿಸುವ ಈ ಬೆಳವಣಿಗೆಯು ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
ಉಡುಪಿ ಜಿಲ್ಲೆಯ ಕಾಪು ಮಾರಿಗುಡಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಲಾಗಿತ್ತು. ನಂತರ ಉಡುಪಿಯ ವಿವಿಧ ದೇವಸ್ಥಾನಗಳು, ದಕ್ಷಿಣ ಕನ್ನಡ ಜಿಲ್ಲೆಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆ, ಶಿವಮೊಗ್ಗ ಮಾರಿ ಜಾತ್ರೆ, ಶಿರಸಿ ಮಾರಿಕಾಂಬಾ ಜಾತ್ರೆಯಲ್ಲೂ ಮುಸ್ಲಿಂ ವ್ಯಾಪಾರಿಗಳು ಪಾಲ್ಗೊಳ್ಳಬಾರದು ಎಂಬ ಬ್ಯಾನರ್ ಹಾಕಲಾಗಿತ್ತು. ಕೆಲವೆಡೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗಳಿಂದಲೇ ಆದೇಶ ಹೊರಡಿಸಲಾಗಿತ್ತು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಕಿಗ್ಗಾದ ಋಷ್ಯಶೃಂಗ ದೇವಸ್ಥಾನ, ಅಡ್ಡಗದ್ದೆ ವನದುರ್ಗಾಪರಮೇಶ್ವರಿ ಜಾತ್ರೆಗಳಲ್ಲೂ ಇಂತಹ ಪ್ರಯತ್ನಗಳು ನಡೆದಿವೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಮಂಗಳೂರಿನ ಮಂಗಳಾದೇವಿ ದೇವಸ್ಥಾನ, ಕಾಟಿಪಳ್ಳದ ಗಣೇಶ ದೇವಸ್ಥಾನಗಳಲ್ಲೂ ಬ್ಯಾನರ್ ಹಾಕಲಾಗಿದೆ. ಬಪ್ಪನಾಡು ಜಾತ್ರೆಯಲ್ಲಿ ವ್ಯಾಪಾರ ನಡೆಸಲು ನೋಂದಣಿ ಮಾಡಿಸಿದ್ದ 85 ಮುಸ್ಲಿಂ ವ್ಯಾಪಾರಿಗಳ ಪೈಕಿ 53 ಮಂದಿ ಬುಧವಾರ ಠೇವಣಿ ವಾಪಸ್ ಪಡೆದಿದ್ದಾರೆ.
ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಯು.ಟಿ. ಖಾದರ್ ಮತ್ತು ರಿಜ್ವಾನ್ ಅರ್ಷದ್, ‘ರಾಜ್ಯದಲ್ಲಿ ಕೆಲವರಿಂದ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ. ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ. ಅಂತಹವರನ್ನು ಪತ್ತೆಹಚ್ಚುವ ಪ್ರಯತ್ನ ಪೊಲೀಸರಿಂದ ಆಗುತ್ತಿಲ್ಲ’ ಎಂದು ದೂರಿದರು.
‘ನಿರ್ದಿಷ್ಟ ಧರ್ಮದ ಜನರಿಗೆ ವ್ಯಾಪಾರ ನಡೆಸಲು ಅವಕಾಶ ನೀಡಬಾರದು ಎಂದು ಪೋಸ್ಟರ್, ಬ್ಯಾನರ್ ಹಾಕಲಾಗುತ್ತಿದೆ. ಯಾರೂ ತಮ್ಮ ಹೆಸರಿನಲ್ಲಿ ಈ ಕೆಲಸ ಮಾಡುತ್ತಿಲ್ಲ. ‘ಬಾಂಧವರು’, ‘ಬಂಧುಗಳು’ ಎಂದು ಹೇಳಿಕೊಂಡು ಇಂತಹ ಕೃತ್ಯ ಎಸಗುವವರು ಹೇಡಿಗಳು’ ಎಂದು ಖಾದರ್ ಟೀಕಿಸಿದ್ದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
ಖಾದರ್ ಹೇಳಿಕೆಯನ್ನು ಬಿಜೆಪಿಯ ಕೆ.ಜಿ. ಬೋಪಯ್ಯ ಆಕ್ಷೇಪಿಸಿದರು. ಬಿಜೆಪಿಯ ಕೆ. ರಘುಪತಿ ಭಟ್, ಜಿ. ಸೋಮಶೇಖರ ರೆಡ್ಡಿ, ಸಂಜೀವ ಮಠಂದೂರು, ಹರೀಶ್ ಪೂಂಜ, ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಹಲವರು ಎದ್ದುನಿಂತು ಏರಿದ ದನಿಯಲ್ಲಿ ಖಾದರ್ ವಿರುದ್ಧ ವಾಗ್ದಾಳಿಗೆ ಇಳಿದರು.
Discover more from Coastal Times Kannada
Subscribe to get the latest posts sent to your email.
Discussion about this post