ಶ್ರೀನಗರ, ಏಪ್ರಿಲ್ 24: ಜಮ್ಮು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದು, 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ದಾಳಿ ನಡೆಸಿದ ಶಂಕಿತ ಉಗ್ರರ ರೇಖಾಚಿತ್ರಗಳನ್ನು ಜಮ್ಮು ಕಾಶ್ಮೀರ ಪೊಲೀಸರು ಹಂಚಿಕೊಂಡಿದ್ದು, ಅವರ ಬಗ್ಗೆ ಸುಳಿವು ಕೊಟ್ಟವರಿಗೆ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.
ಸ್ಥಳೀಯ ಪೊಲೀಸರು ಮತ್ತು ಕೇಂದ್ರದ ಅಧೀನಕ್ಕೆ ಬರುವ ಬರುವ ಭದ್ರತಾ ಸಂಸ್ಥೆಗಳು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು, ದಾಳಿ ನಡೆಸಿದ ಉಗ್ರರ ಪತ್ತೆಗೆ ಜಾಲ ಬೀಸಿವೆ. ಈ ಭೀಕರ ದಾಳಿಯ ಹಿಂದಿನ ಕ್ರೂರ ಯೋಜನೆಯನ್ನು ಬಯಲು ಮಾಡಲು ಅನುವಾಗುವಂತೆ ಉಗ್ರರ ಚಹರೆಯುಳ್ಳ ರೇಖಾಚಿತ್ರವನ್ನು ಪ್ರಕಟಿಸಿವೆ.
ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾದ (ಎಲ್ ಎಟಿ) ಅಂಗಸಂಸ್ಥೆಯಾದ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿ ನಡೆಸಿದ್ದಾಗಿ ಹೇಳಿದೆ. ಈ ಸಂಘಟನೆಗೆ ಸಂಬಂಧಿಸಿದ ಭಯೋತ್ಪಾದಕರನ್ನು ಹಿಡಿಯಲು ಈ ರೇಖಾಚಿತ್ರಗಳು ನೆರವಾಗಲಿವೆ. ಇದರಲ್ಲಿರುವ ಉಗ್ರರ ಗುರುತು ಸಿಕ್ಕಲ್ಲಿ ತಕ್ಷಣವೇ ಮಾಹಿತಿ ನೀಡುವಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.
ಸಾರ್ವಜನಿಕರಿಗೆ ಮನವಿ ಮಾಡಿರುವ ಪೊಲೀಸರು, ಮಾಹಿತಿದಾರರ, ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಯಾವುದೇ ಸಂಬಂಧಿತ ಮಾಹಿತಿಯನ್ನು ಹೊಂದಿರುವ ನಾಗರಿಕರು ಅನಂತ್‌ನಾಗ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಅಥವಾ ಪೊಲೀಸ್ ನಿಯಂತ್ರಣ ಕೊಠಡಿ (PCR) ಅವರನ್ನು ನೇರವಾಗಿ ಈ ಕೆಳಗಿನ ಸಂಪರ್ಕ ಸಂಖ್ಯೆಗಳಲ್ಲಿ ಸಂಪರ್ಕಿಸಲು ಕೋರಲಾಗಿದೆ:
ಎಸ್ಎಸ್ಪಿ ಅನಂತನಾಗ್ : 9596777666, ಪಿಸಿಆರ್ ಅನಂತನಾಗ್ : 9596777669 ಇ- ಮೇಲ್ : dpoanantnag-jk@nic.in ಮಾಹಿತಿ ನೀಡಬಹುದು. ಕಾಶ್ಮೀರ ಕಣಿವೆಯಲ್ಲಿ ಸಾರ್ವಜನಿಕರ ಸುರಕ್ಷತೆಗೆ ಯಾವುದೇ ಅಡಚಣೆ ಉಂಟಾಗದಂತೆ ತಡೆಯಲು ಕಾನೂನು ಜಾರಿ ಸಂಸ್ಥೆಗಳು ಪ್ರಯತ್ನಗಳನ್ನು ತೀವ್ರಗೊಳಿಸಿವೆ.
Discover more from Coastal Times Kannada
Subscribe to get the latest posts sent to your email.
Discussion about this post