ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಉತ್ತರ ಪ್ರದೇಶದ ಆಗ್ರಾದಲ್ಲಿರುವ ಪ್ರಸಿದ್ಧ ತಾಜ್ ಮಹಲ್ನ ವಾಸ್ತುಶಿಲ್ಪ ಶೈಲಿಯನ್ನು ಪ್ರತಿಬಿಂಬಿಸುವ ಭವ್ಯ ಮಸೀದಿ ಶೀಘ್ರದಲ್ಲೇ ತಲೆ ಎತ್ತಲಿದೆ. 50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಮಸೀದಿ ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯಕ್ಕೆ ಹೊಸ ಆಯಾಮ ನೀಡಲಿದೆ.
ಮಸೀದಿಗೆ ದುಬೈ, ಕರ್ನಾಟಕ, ಗೋವಾ, ಆಂಧ್ರ ಪ್ರದೇಶದ ವಾಸ್ತುಶಿಲ್ಪಿಗಳು ನೀಲನಕ್ಷೆ ಸಿದ್ದಪಡಿಸಿದ್ದಾರೆ. 8 ಮಿನಾರ್, 6 ಗುಂಬಜ್, 5 ಪ್ರವೇಶದ್ವಾರಗಳನ್ನು ನಿರ್ಮಿಸಲಾಗುತ್ತಿದೆ. ನೆಲ ಹಾಗೂ ಮೊದಲ ಮಹಡಿ 14 ಅಡಿ, ಎರಡನೇ ಅಂತಸ್ತು 12 ಅಡಿ ಇರಲಿದ್ದು, ಒಟ್ಟು 40 ಅಡಿಯ ಕಟ್ಟಡ ನಿರ್ಮಾಣವಾಗಲಿದೆ. ನೆಲ ಹಾಗೂ ಎರಡೂ ಅಂತಸ್ತಿನಲ್ಲಿ ಪ್ರಾರ್ಥನೆಗೆ, ನೆಲಮಹಡಿಯಲ್ಲಿ ಧರ್ಮಗುರುಗಳ ಪ್ರವಚನಕ್ಕೆ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ. ಇದು ಕರ್ನಾಟಕದ ಅತಿದೊಡ್ಡ ಮಸೀದಿಯಾಗಲಿದ್ದು 10,000 ಜನರಿಗೆ ಒಮ್ಮೆಗೆ ಸೇರಲು ಅವಕಾಶ ಕಲ್ಪಿಸಲಿದೆ.
ಗೋಡೆಗಳಿಗೆ ಪೈಂಟಿಂಗ್ ಬದಲು ಒಳಾಂಗಣ ಹಾಗೂ ಹೊರಾಂಗಣಕ್ಕೆ ಅಮೃತಶಿಲೆ ಬಳಸಲು ನಿರ್ಧರಿಸಲಾಗಿದೆ. ಮೆರುಗು ಹೆಚ್ಚಿಸಲು ಮುಂಭಾಗದಲ್ಲಿ 40 ಅಡಿ ಅಗಲ ಮತ್ತು 70 ಅಡಿ ಉದ್ದದ ಒಂದೂವರೆ ಅಡಿ ಆಳದ ಕೊಳ ನಿರ್ಮಿಸಲಾಗುತ್ತದೆ. ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾದ ಆವರಣದಲ್ಲಿ ಮಸೀದಿ ನಿರ್ಮಾಣವಾಗಲಿದೆ.
ಉಳ್ಳಾಲ ದರ್ಗಾದ ಅಧ್ಯಕ್ಷ ಹನೀಫ್ ಹಾಜಿ ಅವರು ಮಾತನಾಡಿ, “ತಾಜ್ ಮಹಲ್ ಹೋಲುವಂತೆ ಉಳ್ಳಾಲದಲ್ಲಿ ಮಸೀದಿ ನಿರ್ಮಾಣಕ್ಕೆ ಸಿದ್ದತೆಗಳು ನಡೆದಿವೆ. ಉಳ್ಳಾಲ ಜಮಾತ್ನಲ್ಲಿ ಕೋಟೆಪುರದಿಂದ ಮದನಿನಗರ, ಕುಂಪಲ, ಕಲ್ಲಾಪು ಸೇರಿ 28 ಮೊಹಲ್ಲ, 34 ಮಸೀದಿ ಹಾಗೂ 34 ಮದರಸಾಗಳಿವೆ. ಸಾವಿರಾರು ಮನೆಗಳಿದ್ದು, ಪ್ರತೀ ಮನೆಯಿಂದ ಅವರವರ ಇಚ್ಛಾನುಸಾರ ದೇಣಿಗೆ ಸ್ವೀಕರಿಸಿ ಮುಂದಿನ 2 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಿದ್ದೇವೆ” ಎಂದು ತಿಳಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post