ಮಂಗಳೂರು: ಹೆಂಡತಿ ಮನೆ ಬಿಟ್ಟು ಹೋದ ವಿಚಾರಕ್ಕೆ ಕೋಪಗೊಂಡ ಪತಿಯೋರ್ವ (ಮದುವೆ ಬ್ರೋಕರ್) ಸ್ವಂತ ಚಿಕ್ಕಪ್ಪನನ್ನೇ ಹತ್ಯೆ ಮಾಡಿದ ಘಟನೆ ನಡೆದಿದೆ. ನಗರದ ಹೊರವಲಯದ ವಳಚಿಲ್‌ನಲ್ಲಿ ಗುರುವಾರ ರಾತ್ರಿ ಸುಲೇಮಾನ್ (50) ಎಂಬವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಘಟನೆಯಲ್ಲಿ ಸುಲೇಮಾನ್ ಅವರ ಇಬ್ಬರು ಪುತ್ರರಾದ ರಿಯಾಬ್ ಮತ್ತು ಸಿಯಾಬ್ ಗಾಯಗೊಂಡಿದ್ದಾರೆ. ಮುಸ್ತಫಾ (30) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ, ಮೃತ ಸುಲೇಮಾನ್ ಅವರು ಕೊಲೆ ಆರೋಪಿ ಮುಸ್ತಫಾ ಸ್ವಂತ ಚಿಕ್ಕಪ್ಪ ವಿವಾಹ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದರು. ಇವರು ಆರೋಪಿ ಮುಸ್ತಫಾ ಎಂಬಾತನಿಗೆ ಮಹಿಳೆಯೊಂದಿಗೆ ಸುಮಾರು 8 ತಿಂಗಳ ಹಿಂದೆ ವಿವಾಹ ಮಾಡಿಸಿದ್ದರು. ಆದರೆ, ವೈವಾಹಿಕ ಜೀವನದಲ್ಲಿ ಉಂಟಾದ ಕಲಹದಿಂದ ಮಹಿಳೆಯು ಎರಡು ತಿಂಗಳ ಹಿಂದೆ ತಮ್ಮ ತವರು ಮನೆಗೆ ಮರಳಿದ್ದರು. ಇದರಿಂದ ಮುಸ್ತಫಾ ಮತ್ತು ಸುಲೇಮಾನ್ ನಡುವೆ ಒಡಕು ಉಂಟಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗುರುವಾರ ರಾತ್ರಿ ಮುಸ್ತಫಾ ಸುಲೇಮಾನ್‌ಗೆ ಕರೆ ಮಾಡಿ ಅವಾಚ್ಯ ಶಬ್ದಗಳಲ್ಲಿ ಬೈಯ್ದಿದ್ದಾನೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಸುಲೇಮಾನ್ ತಮ್ಮ ಇಬ್ಬರು ಪುತ್ರರಾದ ರಿಯಾಬ್ ಮತ್ತು ಸಿಯಾಬ್ ಜೊತೆಗೆ ವಳಚಿಲ್‌ನಲ್ಲಿರುವ ಮುಸ್ತಫಾ ಮನೆಗೆ ಈ ಬಗ್ಗೆ ಚರ್ಚಿಸಲು ತೆರಳಿದ್ದರು. ರಿಯಾಬ್ ಮತ್ತು ಸಿಯಾಬ್ ರಸ್ತೆಯ ಬದಿಯಲ್ಲಿ ಕಾಯುತ್ತಿದ್ದಾಗ, ಸುಲೇಮಾನ್ ಮುಸ್ತಫಾನ ಜೊತೆ ಮಾತನಾಡಲು ಹೋಗಿದ್ದರು. ಆದರೆ, ಚರ್ಚೆ ಫಲಕಾರಿಯಾಗದೇ, ಹಿಂತಿರುಗಿ ಬರುವ ಸಮಯದಲ್ಲಿ, ಮುಸ್ತಫಾ ತನ್ನ ಮನೆಯಿಂದ ಕೂಗುತ್ತಾ, ಬೆದರಿಕೆ ಹಾಕುತ್ತಾ ಓಡಿ ಬಂದು, ಚಾಕುವಿನಿಂದ ಸುಲೇಮಾನ್‌ರ ಕುತ್ತಿಗೆಯ ಬಲಭಾಗಕ್ಕೆ ಇರಿದಿದ್ದಾನೆ. ಗಾಯಗೊಂಡ ಸುಲೇಮಾನ್ ರಕ್ತಸ್ರಾವದಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಆನಂತರ ಸ್ಥಳೀಯರು ಸೇರಿ ಮೂವರನ್ನೂ ಕಾರಿನಲ್ಲಿ ಹಾಕಿ, ಅಡ್ಯಾರ್ ಆಸ್ಪತ್ರೆಗೆಂದು ತರುತ್ತಿದ್ದರು. ಆದರೆ, ವಳಚ್ಚಿಲ್ ನಲ್ಲಿ ಬರುತ್ತಿದ್ದಾಗಲೇ ಅಡ್ಡಲಾಗಿದ್ದ ರೈಲ್ವೇ ಗೇಟ್ ಹಾಕಲಾಗಿತ್ತು. ಇದರಿಂದ ಮತ್ತೆ 15 ನಿಮಿಷ ವಿಳಂಬವಾಗಿದ್ದು, ಸುಲೇಮಾನ್ ರಕ್ತ ಸ್ರಾವದಿಂದಾಗಿ ಅಷ್ಟರಲ್ಲಿ ಜೀವ ಹಾರಿ ಹೋಗಿತ್ತು. ರಿಯಾಬ್ ಮತ್ತು ಸಿಯಾಬ್ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ದೂರಿನ ಆಧಾರದ ಮೇಲೆ, ಮಂಗಳೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS), 2023ರ ಸೆಕ್ಷನ್ 103(1), 109(1), 118(1), 351(2), 351(3), ಮತ್ತು 352ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮುಸ್ತಫಾನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post