ಮಂಗಳೂರು, ಜೂ.24: ನಗರವನ್ನು ಆ. 15ರೊಳಗೆ ಡ್ರಗ್ಸ್ ಮುಕ್ತಗೊಳಿಸುವ ಪ್ರಯತ್ನವಾಗಿ ಪೊಲೀಸರು ವಿಶೇಷ ಅಭಿಯಾನ ಹಮ್ಮಿಕೊಂಡಿದ್ದು, ಹೈಸ್ಕೂಲ್ ಮೇಲ್ಪಟ್ಟ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು, ಡ್ರಗ್ಸ್ ಪೂರೈಕೆಯ ದಾರಿಗಳನ್ನು ಪತ್ತೆ ಹಚ್ಚುವ ಉದ್ದೇಶವನ್ನು ಹೊಂದಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರೇಟ್‌ನ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ದಿನೇಶ್ ಕುಮಾರ್ ಹೇಳಿದ್ದಾರೆ.
ಉರ್ವ ಪೊಲೀಸ್ ಠಾಣೆಯಲ್ಲಿ ಶನಿವಾರ ಠಾಣಾ ವ್ಯಾಪ್ತಿಯ ಸಾರ್ವಜನಿಕರ ಕುಂದುಕೊರತೆ ಆಲಿಕೆ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಅಭಿಯಾನದಲ್ಲಿ ವೈದ್ಯರು ಕೈಜೋಡಿಸಲಿದ್ದು, ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಡ್ರಗ್ಸ್ ಬಗ್ಗೆ ಸಾರ್ವಜನಿಕರು ಜಾಗೃತರಾಗದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿ ಮನೆಗೂ ಡ್ರಗ್ಸ್ ಹಾವಳಿ ವ್ಯಾಪಿಸುವ ಅಪಾಯವಿದೆ. ಮಾಹಿತಿ ನೀಡುವವರ ವಿವರ ಗೌಪ್ಯವಾಗಿರಿಸಲಿದ್ದು, ಅದರ ಪೂರ್ಣ ಹೊಣೆಯನ್ನು ತಾನು ನಿಭಾಯಿಸುವುದಾಗಿ ಡಿಸಿಪಿ ದಿನೇಶ್ ಕುಮಾರ್ ಹೇಳಿದರು.
ಸಾರ್ವಜನಿಕರು ಮನೆ ಅಥವಾ ಫ್ಲ್ಯಾಟ್‌ನ್ನು ಬಾಡಿಗೆಗೆ ನೀಡುವ ಮೊದಲು ಬಾಡಿಗೆದಾರರ ಪೂರ್ವಾಪರವನ್ನು ವಿಚಾರಿಸಬೇಕು, ಅನಂತರವೂ ಅವರ ಮೇಲೆ ನಿಗಾ ಇಟ್ಟುಕೊಳ್ಳಬೇಕು ಎಂದು ಅವರು ಈ ಸಂದರ್ಭ ಸೂಚನೆ ನೀಡಿದರು.
ಇನ್ಸ್‌ಪೆಕ್ಟರ್ ಭಾರತಿ ಅವರು ಮಾತನಾಡಿ, ಸಾರ್ವಜನಿಕರು ತಮ್ಮ ಮನೆಯ ಅಕ್ಕಪಕ್ಕ ಅಪರಿಚಿತರು ಸಂಶಯಾಸ್ಪದವಾಗಿ ನಡೆದುಕೊಳ್ಳುತ್ತಿದ್ದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಉರ್ವ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬಾಡಿಗೆ ಮನೆಯಲ್ಲಿ ಮಾದಕ ದ್ರವ್ಯ ವ್ಯಸನಿಗಳು ಇರುವುದು ಪತ್ತೆಯಾಗಿತ್ತು. ಆದರೆ ಬಾಡಿಗೆ ಮನೆಯ ಮಾಲಕರಿಗೆ ಅವರ ಬಾಡಿಗೆ ಮನೆಯಲ್ಲಿ ಎಷ್ಟು ಮಂದಿ ಇದ್ದರು ಎಂಬ ಮಾಹಿತಿಯೂ ಇರಲಿಲ್ಲ ಎಂದು ಹೇಳಿದರು.
ಸಾರ್ವಜನಿಕರಿಗೆ ಸೂಚನೆ :
* ಸಂಚಾರ ನಿಯಮ ಉಲ್ಲಂಘನೆಯ ಫೋಟೊ, ಮಾಹಿತಿಯನ್ನು ಸಾರ್ವಜನಿಕರು 9480802305 ಅಥವಾ 9480802321ಗೆ ಕಳುಹಿಸಬಹುದು.
*ಪುಟ್‌ಪಾತ್‌ನಲ್ಲಿ ವಾಹನ ನಿಲ್ಲಿಸಿದರೆ ಕ್ರಮ.
*ಎಫ್‌ಐಆರ್ ಅಥವಾ ದೂರು ದಾಖಲಿಸಿಕೊಳ್ಳಲು ಪೊಲೀಸರು ಹಿಂಜರಿದರೆ ಮೇಲಾಧಿಕಾರಿಗಳಿಗೆ ದೂರು ನೀಡಿ.
* ಡ್ರಗ್ಸ್ ಸೇವನೆ ಬಗ್ಗೆ ಪೋಷಕರಿಗೆ ಮಾಹಿತಿ ಇದ್ದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ದೂರು ದಾಖಲಿಸದೆ ಚಿಕಿತ್ಸೆ ಕೊಡಿಸಲಾಗುವುದು.
Discover more from Coastal Times Kannada
Subscribe to get the latest posts sent to your email.
Discussion about this post