ಉಡುಪಿ, ಜೂನ್ 24: ನಗರದ ಖಾಸಗಿ ಶಾಲೆಯೊಂದಕ್ಕೆ ಇ-ಮೇಲ್ ಮೂಲಕ ಹುಸಿ ಬಾಂಬ್ ಕರೆ ಬಂದಿರುವ ಘಟನೆಗೆ ಸಂಬಂಧಿಸಿದಂತೆ ತಮಿಳುನಾಡಿನ ಚೆನ್ನೈ ಮೂಲದ ಮಹಿಳೆಯೊಬ್ಬರನ್ನು ಅಹಮದಾಬಾದ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆಕೆಯೇ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗುತ್ತಿದೆ. ಇಂಜಿನಿಯರಿಂಗ್ ಅಧ್ಯಯನ ಮಾಡಿ ಚೆನ್ನೈಯಲ್ಲಿ ಎಂಜಿನಿಯರ್ ಆಗಿದ್ದ ರೀನಾ ಜೊಶಿಲ್ಡ, ಹುಸಿ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದಳು.
ಆರೋಪಿ ರೀನಾ ಉಡುಪಿ ನಗರದ ವಿದ್ಯೋದಯ ಪಬ್ಲಿಕ್ ಸ್ಕೂಲ್‌ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಯೊಡ್ಡಿದ್ದಳು. ಹೀಗಾಗಿ ತನಿಖೆಗಾಗಿ ಆರೋಪಿಯನ್ನು ಅಹಮದಾಬಾದ್ ಪೊಲೀಸರಿಂದ ಉಡುಪಿ ಪೊಲೀಸರು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಜೂನ್ 16ರಂದು ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು.
ಚೆನ್ನೈ ಮೂಲದ ಎಲೆಕ್ಟ್ರಿಕಲ್ ಇಂಜಿನಿಯರ್ ಮತ್ತು ಐಟಿ ಸಂಸ್ಥೆಯ ಹಿರಿಯ ಸಲಹೆಗಾರೆಯಾಗಿರುವ ರೆನೆ ಜೋಶಿಲ್ಡಾ ಎಂಬಾಕೆ ಹುಸಿ ಇ-ಮೇಲ್ ಐಡಿ ಮತ್ತು ನಕಲಿ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ಬಳಸಿ ಈ ಬೆದರಿಕೆ ಇ-ಮೇಲ್‌ಗಳನ್ನು ಕಳುಹಿಸಿದ್ದಳು. ಮಹಾರಾಷ್ಟ್ರ, ಕರ್ನಾಟಕ, ರಾಜಸ್ಥಾನ, ತಮಿಳುನಾಡು, ದೆಹಲಿ, ಕೇರಳ, ಬಿಹಾರ, ತೆಲಂಗಾಣ, ಪಂಜಾಬ್, ಮಧ್ಯಪ್ರದೇಶ ಮತ್ತು ಹರಿಯಾಣ ರಾಜ್ಯಗಳಾದ್ಯಂತ ಈ ಇ-ಮೇಲ್‌ಗಳನ್ನು ಕಳುಹಿಸಿದ್ದು ಪತ್ತೆಯಾಗಿದೆ. ಆರೋಪಿ ಮಹಿಳೆಯು ಈ ಸಂಸ್ಥೆಗಳಿಗೆ ಒಟ್ಟು 21 ಬೆದರಿಕೆ ಇ-ಮೇಲ್‌ಗಳನ್ನು ಕಳುಹಿಸಿರುವುದಾಗಿ ಪತ್ತೆಹಚ್ಚಲಾಗಿದೆ.
ಆರೋಪಿ ನಕಲಿ ಇ-ಮೇಲ್ ಐಡಿಗಳನ್ನು, ವಿಪಿಎನ್‌ಗಳನ್ನು, ವರ್ಚುವಲ್ ಸಂಖ್ಯೆಗಳನ್ನು ಮತ್ತು ಡಾರ್ಕ್ ವೆಬ್ ಪರಿಕರಗಳನ್ನು ಬಳಸಿ ಬಾಂಬ್ ಬೆದರಿಕೆ ಇ-ಮೇಲ್‌ಗಳನ್ನು ಕಳುಹಿಸಿ ಬೆದರಿಸುವ ಮತ್ತು ಆತಂಕವನ್ನು ಸೃಷ್ಟಿಸುವ ಪ್ರಯತ್ನ ನಡೆಸಿದ್ದಳು. ಸರ್ಖೇಜ್‌ನ ಜಿನೇವಾ ಲಿಬರಲ್ ಶಾಲೆಗೆ ಬಂದ ಬೆದರಿಕೆ ಇ-ಮೇಲ್ ಕುರಿತು ವಿಷ್ಣುಭಾಯಿ ಚಮನ್‌ಭಾಯಿ ಖಖಾಡಿಯಾ ಅವರು ನೀಡಿದ ದೂರಿನನ್ವಯ, ಸೈಬರ್ ಅಪರಾಧ ವಿಭಾಗದ ತಂಡಗಳು ಜಂಟಿ ಪೊಲೀಸ್ ಆಯುಕ್ತರಾದ ಶರದ್ ಸಿಂಘಾಲ್, ಡಿಸಿಪಿ ಡಾ. ಲವಿನಾ ಸಿನ್ಹಾ ಮತ್ತು ಎಸಿಪಿ ಹಾರ್ದಿಕ್ ಮಕಾಡಿಯಾ ಅವರ ನೇತೃತ್ವದಲ್ಲಿ ತನಿಖೆಯನ್ನು ಪ್ರಾರಂಭಿಸಿದವು.
ಜೂನ್ 3, 2025 ರಂದು ಬೆಳಿಗ್ಗೆ 10:58 ಕ್ಕೆ divijprabhakaraO@gmail.com ನಿಂದ ಈ ಇ-ಮೇಲ್ ಬಂದಿತ್ತು.
ಸೈಬರ್ ಕ್ರೈಂ ಬ್ರಾಂಚ್ ಮಾನವ ಗುಪ್ತಚರ ಮತ್ತು ಸೈಬರ್ ಪರಿಕರಗಳನ್ನು ಒಳಗೊಂಡಂತೆ ಸಂಪೂರ್ಣ ತಾಂತ್ರಿಕ ವಿಶ್ಲೇಷಣೆ ನಡೆಸಿತು. ಇದರಿಂದಾಗಿ ತಮಿಳುನಾಡಿನ ಚೆನ್ನೈನಲ್ಲಿ ವಾಸವಾಗಿರುವ ಆರೋಪಿ ರೆನೆ ಜೋಶೀಲ್ಡಾಳನ್ನು ಪತ್ತೆಹಚ್ಚಲು ಸಹಾಯವಾಯಿತು. ನಿಖರ ಪುರಾವೆಗಳನ್ನು ಸಂಗ್ರಹಿಸಿದ ನಂತರ, ಚೆನ್ನೈಗೆ ತಂಡವನ್ನು ಕಳುಹಿಸಲಾಗಿತ್ತು. ಅಲ್ಲಿ ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಲಾಯಿತು. ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ.
ಈ ಬಂಧನದ ಕುರಿತು ಪ್ರತಿಕ್ರಿಯಿಸಿದ ಉಡುಪಿ ಎಸ್‌ಪಿ ಹರಿರಾಮ್ ಶಂಕರ್, “ಆರೋಪಿಯನ್ನು ತನಿಖೆಗಾಗಿ ನಮಗೆ ಹಸ್ತಾಂತರಿಸುವಂತೆ ಅಹಮದಾಬಾದ್ ಪೊಲೀಸರಿಗೆ ನಾವು ಬರೆಯುತ್ತೇವೆ. ಅಹಮದಾಬಾದ್ ಪೊಲೀಸರ ತನಿಖೆ ಮುಗಿದ ನಂತರ ಆಕೆಯನ್ನು ನಮಗೆ ಹಸ್ತಾಂತರಿಸುವ ನಿರೀಕ್ಷೆಯಿದೆ” ಎಂದು ತಿಳಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post