ಬೆಂಗಳೂರು: ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಲಿಚ್ಛಿಸುವವರು ಹಾಗು ಪರೀಕ್ಷೆಯಲ್ಲಿ ಪಾಸ್ ಆಗದೆ ಇರುವಂತಹ ವಿದ್ಯಾರ್ಥಿಗಳು ದುಡ್ಡು ಕೊಟ್ಟರೆ ಸಾಕು, ಯಾವ ಕೋರ್ಸ್ನ ಅಂಕಪಟ್ಟಿಯನ್ನು ಬೇಕಾದರು ನಕಲಿ ಮಾಡಿಕೊಡುತ್ತಿದ್ದ ಇಬ್ಬರು ಆರೋಪಿಗಳನ್ನು ಶೇಷಾದ್ರಿಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಮೂಲದ ಅಯೂಬ್ ಪಾಷ ಹಾಗೂ ಖಲೀಲ್ ವುಲ್ಲಾ ಬೇಗ್ ಬಂಧಿತ ಆರೋಪಿಗಳು. ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ಆರೋಪಿಗಳು ಮುಖ್ಯವಾಗಿ ಸೌದಿ ಅರೇಬಿಯಾ, ದುಬೈ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ತೆರಳಲಿಚ್ಛಿಸುವವರಿಗೆ ಬಿ.ಕಾಂ, ಬಿಬಿಎಂ, ಬಿಇ, ದ್ವಿತೀಯ ಪಿಯುಸಿ ಸೇರಿದಂತೆ ವಿವಿಧ ನಕಲಿ ಮಾರ್ಕ್ಸ್ ಕಾರ್ಡ್ಸ್ ತಯಾರಿಸಿ ಕೊಡುತ್ತಿದ್ದರು. ಪ್ರತಿಯಾಗಿ ಮಾರ್ಕ್ಸ್ ಕಾರ್ಡಿಗೆ ಇಷ್ಟು ಎಂಬಂತೆ 20-30 ಸಾವಿರ ಪಡೆಯುತ್ತಿದ್ದರು. ಬಂಧಿತರ ವಿರುದ್ಧ 2003 ರಲ್ಲಿಯೂ ಒಮ್ಮೆ ಪ್ರಕರಣ ದಾಖಲಾಗಿತ್ತು. ಪುನಃ ಸ್ಥಳೀಯ ಯುವಕರ ಮೂಲಕ ದಂಧೆ ಆರಂಭಿಸಿದ್ದರು. ದಂಧೆಯ ಮಾಹಿತಿ ಪಡೆದ ಶೇಷಾದ್ರಿಪುರಂ ಪೊಲೀಸರು ಸದ್ಯ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ನಕುಲಿ ಮಾರ್ಕ್ ಕಾರ್ಡ್ಸ್, ಲ್ಯಾಪ್‌ಟಾಪ್, ಪ್ರಿಂಟಿಂಗ್ ಮಷಿನ್ ಹಾಗೂ 2 ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆದಿದ್ದಾರೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post