ಬಂಟ್ವಾಳ, ಆ.23 : ಗೋಳ್ತಮಜಲು ಗ್ರಾಮದ ಪಟ್ಟೆಕೋಡಿ ಎಂಬಲ್ಲಿ ಪಡಿತರ ಅಕ್ಕಿಯನ್ನು ಆಕ್ರಮವಾಗಿ ದಾಸ್ತಾನು ಇಟ್ಟಿರುವ ಬಗ್ಗೆ ಮಾಹಿತಿ ಮೇರೆಗೆ, ಬಂಟ್ವಾಳ ತಾಲೂಕು ಕಚೇರಿಯ ಆಹಾರ ನಿರೀಕ್ಷಕ ಎ ಪ್ರಶಾಂತ ಶೆಟ್ಟಿ ಅವರು, ಬಂಟ್ವಾಳ ನಗರ ಠಾಣೆಯ ಪೊಲೀಸರ ಸಹಕಾರದೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ್ದು 64 ಗೋಣಿ ಚೀಲಗಳಲ್ಲಿ ಸಂಗ್ರಹಿಸಿಟ್ಟಿದ್ದ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ಒಟ್ಟು 64 ಗೋಣಿ ಚೀಲಗಳಲ್ಲಿ ರೂ.58,288/-ಮೌಲ್ಯದ 2103.35 ಕೆ.ಜಿ ಬೆಳ್ತಿಗೆ ಅಕ್ಕಿ ಮತ್ತು 467.10 ಕೆ.ಜಿ ಕುಚ್ಚಲಕ್ಕಿಯನ್ನು ಆಕ್ರಮವಾಗಿ ಸಂಗ್ರಹಿಸಿಟ್ಟಿರುವುದು ಕಂಡುಬಂದಿದೆ. ದಾಳಿಯ ವೇಳೆ ಸದ್ರಿ ಅಕ್ಕಿಯನ್ನು ಆಟೋ ರಿಕ್ಷಾದಲ್ಲಿ ಬೇರೆಡೆ ಸಾಗಾಟ ಮಾಡಲು ಸಿದ್ದತೆ ನಡೆಸಿರುವುದು ಕಂಡುಬಂದಿರುತ್ತದೆ. ಸದ್ರಿ ಕೃತ್ಯದಲ್ಲಿ ಆರೋಪಿ ಗೋಳ್ತಮಜಲು ನಿವಾಸಿ ಉಮ್ಮರಬ್ಬ ಯಾನೆ ಪುತ್ತುಮೋನು (47) ಹಾಗೂ ಕೆಲಸಗಾರ ರಫೀಕ್ (42) ಎಂಬಾತನೂ ಭಾಗಿಯಾಗಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಖಚಿತ ವರ್ತಮಾನದ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ಬಂಟ್ವಾಳ ನಗರ ಪೊಲೀಸರ ಜೊತೆಗೋಡಿ ಈ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿ ವೇಳೆ ಗೋಡೌನಿನಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಅನ್ನಭಾಗ್ಯ ಯೋಜನೆಯ 21.4 ಕ್ವಿಂಟಾಲ್ ಬೆಳ್ತಿಗೆ ಅಕ್ಕಿ ಹಾಗೂ 4.67 ಕ್ವಿಂಟಾಲ್ ಕುಚ್ಚಲು ಅಕ್ಕಿಗಳನ್ನು ಸ್ಥಳದಲ್ಲಿದ್ದ ಅಕ್ಕಿಯ ಗೋಣಿ ಚೀಲಗಳನ್ನು, ಸಾಗಾಟ ಮಾಡಲು ಬಳಸಿದ ಆಟೋರಿಕ್ಷಾ, ತೂಕದ ಯಂತ್ರ, ಖಾಲಿ ಗೋಣಿ ಚೀಲಗಳು ಸೇರಿದಂತೆ ಇತರೆ ಸೊತ್ತುಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಸ್ವಾಧೀನಪಡಿಸಿದ್ದು ಆರೋಪಿಗಳ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ: 96/2025, ಕಲಂ 3, 7 ಅಗತ್ಯ ವಸ್ತುಗಳ ಕಾಯ್ದೆ 1955 ಮತ್ತು ಕಲಂ 18 ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ದತಿ ( ನಿಯಂತ್ರಣ ಆದೇಶ) 2016 ರಂತೆ ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post