ಹೈದರಾಬಾದ್: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ್ ಅವರು ಇಂದು ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪೂಜಾರ, “ಭಾರತೀಯ ಜೆರ್ಸಿ ಧರಿಸುವುದು, ರಾಷ್ಟ್ರಗೀತೆ ಹಾಡುವುದು ಮತ್ತು ಮೈದಾನಕ್ಕೆ ಕಾಲಿಡುವಾಗ ಪ್ರತಿ ಬಾರಿಯೂ ತಂಡಕ್ಕೆ ನನ್ನ ಕೈಲಾದ ಪ್ರಯತ್ನಗಳನ್ನು ಮಾಡುತ್ತಿದ್ದುದರ ನಿಜವಾದ ಅರ್ಥವನ್ನು ಪದಗಳಲ್ಲಿ ಹೇಳುವುದು ಅಸಾಧ್ಯ. ಆದರೆ ಎಲ್ಲಾ ಒಳ್ಳೆಯ ವಿಷಯಗಳು ಒಂದಲ್ಲ ಒಂದು ದಿನ ಕೊನೆಗೊಳ್ಳಲೇಬೇಕು. ಅದರಂತೆ ನಾನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ನಿಮ್ಮ ಪ್ರೀತಿ, ಬೆಂಬಲಕ್ಕೆ ಧನ್ಯವಾದಗಳು” ಎಂದು ತಿಳಿಸಿದ್ದಾರೆ.
“ನಾನು ನನ್ನ ಕ್ರಿಕೆಟ್ ಪ್ರಯಾಣವನ್ನು ಪ್ರಾರಂಭಿಸಿದಾಗ, ಈ ಆಟ ನನಗೆ ಇಷ್ಟೊಂದು ಯಶಸ್ಸು ನೀಡುತ್ತದೆ ಎಂದು ಎಂದಿಗೂ ಭಾವಿಸಿರಲಿಲ್ಲ. ಅಮೂಲ್ಯ ಅವಕಾಶಗಳು, ಅನುಭವ, ಪ್ರೀತಿ ಮತ್ತು ಮುಖ್ಯವಾಗಿ ನನ್ನ ರಾಜ್ಯ ಮತ್ತು ಈ ದೇಶವನ್ನು ಪ್ರತಿನಿಧಿಸಿರುವ ಬಗ್ಗೆ ನನಗೆ ಹೆಮ್ಮೆಯಿದೆ” ಎಂದಿದ್ದಾರೆ. “ನನಗೆ ಅವಕಾಶ, ಬೆಂಬಲ ನೀಡಿದ ಬಿಸಿಸಿಐ ಮತ್ತು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ಗೆ ಧನ್ಯವಾದ ಹೇಳಬಯಸುತ್ತೇನೆ. ಇದಲ್ಲದೆ, ನನಗೆ ಅವಕಾಶ ನೀಡಿದ ಎಲ್ಲಾ ತಂಡಗಳು, ಫ್ರಾಂಚೈಸಿಗಳು ಮತ್ತು ಕೌಂಟಿ ತಂಡಗಳಿಗೂ ನಾನು ಕೃತಜ್ಞ. ನನ್ನ ಗುರುಗಳು, ತರಬೇತುದಾರರು ಮತ್ತು ಮಾರ್ಗದರ್ಶಕರಿಲ್ಲದೆ ನಾನು ಇಲ್ಲಿಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ಅವರಿಗೆ ಯಾವಾಗಲೂ ಋಣಿಯಾಗಿರುತ್ತೇನೆ”.
“ತಂಡದ ಸದಸ್ಯರು, ಸಹಾಯಕ ಸಿಬ್ಬಂದಿ, ನೆಟ್ ಬೌಲರ್‌ಗಳು, ವಿಶ್ಲೇಷಕರು, ಲಾಜಿಸ್ಟಿಕ್ಸ್ ತಂಡ, ಅಂಪೈರ್‌ಗಳು, ಗ್ರೌಂಡ್ ಸ್ಟಾಫ್, ಸ್ಕೋರರ್‌ಗಳು, ಮಾಧ್ಯಮ ಸಿಬ್ಬಂದಿ ಮತ್ತು ತೆರೆಮರೆಯಲ್ಲಿ ಶ್ರಮಿಸುವ ಮತ್ತು ನನಗೆ ಮೈದಾನದಲ್ಲಿ ಉತ್ತಮವಾಗಿ ಆಡುವಂತೆ ಸಹಾಯ ಮಾಡಿದ ಮತ್ತು ಪ್ರಾಯೋಜಕರು, ಪಾಲುದಾರರಿಗೂ ಧನ್ಯವಾದ ಅರ್ಪಿಸುತ್ತೇನೆ” ಎಂದು ಪೂಜಾರ್ ಬರೆದುಕೊಂಡಿದ್ದಾರೆ.
ಚೇತೇಶ್ವರ್ ಪೂಜಾರ್ ಕ್ರಿಕೆಟ್ ಜರ್ನಿ: 2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಪೂಜಾರ, ಟೆಸ್ಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಟೀಮ್ ಇಂಡಿಯಾ ಪರ 100 ಟೆಸ್ಟ್ ಪಂದ್ಯಗಳನ್ನಾಡಿದ ಕೆಲವೇ ಕ್ರಿಕೆಟಿಗರಲ್ಲಿ ಪೂಜಾರ ಒಬ್ಬರು. ತಮ್ಮ 15 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ 103 ಟೆಸ್ಟ್‌ಗ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 7,195 ರನ್ ಗಳಿಸಿದ್ದು, 19 ಶತಕಗಳು ಮತ್ತು 3 ದ್ವಿಶತಕಗಳು ಸೇರಿವೆ. ಅತ್ಯುತ್ತಮ ಸ್ಕೋರ್ 206* ಆಗಿದೆ.
ಇದಲ್ಲದೆ 278 ಪ್ರಥಮ ದರ್ಜೆ ಪಂದ್ಯಗಳು, 130 ಲಿಸ್ಟ್ ಎ ಮತ್ತು 71 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಪ್ರಥಮ ದರ್ಜೆಯಲ್ಲಿ 66 ಶತಕಗಳೊಂದಿಗೆ 21,301 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಲಿಸ್ಟ್ ಎನಲ್ಲಿ 16 ಶತಕಗಳೊಂದಿಗೆ 5,759 ರನ್ ಗಳಿಸಿದ್ದಾರೆ. ಟಿ20 ನಲ್ಲಿ ಒಂದು ಶತಕದೊಂದಿಗೆ 1,556 ರನ್ ಗಳಿಸಿದ್ದಾರೆ. ಜೂನ್ 2023ರಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post