ಕಾಸರಗೋಡು: ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನಗೊಂಡು ಮೃತಪಟ್ಟ ಕಾಸರಗೋಡು ಜಿಲ್ಲೆಯ ಕೆ.ವಿ. ಅಶ್ವಿನ್ ಅವರಿಗೆ ಹುಟ್ಟೂರು ಚೆರುವತ್ತೂರಿನಲ್ಲಿ ಸೋಮವಾರ ಗೌರವಪೂರ್ಣ ಅಂತಿಮ ನಮನ ಸಲ್ಲಿಸಲಾಯಿತು. ಸಾವಿರಾರು ಮಂದಿಯ ಸಮಕ್ಷಮದಲ್ಲಿ ಸೇನೆಯ ಗೌರವಗಳೊಂದಿಗೆ ಅವರ ಮನೆ ಹಿತ್ತಿಲಲ್ಲಿ ಅಂತಿಮ ಸಂಸ್ಕಾರ ಜರುಗಿತು. ಭಾನುವಾರ ರಾತ್ರಿ 7 ಗಂಟೆಗೆ ಸೇನೆಯ ವಿಶೇಷ ವಿಮಾನದಲ್ಲಿ ಅಶ್ವಿನ್ ಅವರ ಮೃತದೇಹವನ್ನು ಕಣ್ಣೂರು ವಿಮಾನ ನಿಲ್ದಾಣಕ್ಕೆ ತರಲಾಗಿದ್ದು, ರಾತ್ರಿ 9.30ರ ವೇಳೆಗೆ ಆಂಬುಲೆನ್ಸ್ ಮೂಲಕ ಚೆರುವತ್ತೂರಿಗೆ ತರಲಾಗಿತ್ತು. ಚೆರುವತ್ತೂರು ಪೂರ್ವ ಕೊಠಡಿಯಲ್ಲಿ ಅಶ್ವಿನ್ ನಿತ್ಯ ಕಬಡ್ಡಿ ಆಡುತ್ತಿದ್ದ ಮೈದಾನದ ಬಳಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಪ್ರೀತಿಯ ಯೋಧನನ್ನು ನೋಡಲು ನೂರಾರು ಜನರು ನೆರೆದಿದ್ದರು.


ಅಶ್ವಿನ್ ಸಹೋದರಿಯ ಮಕ್ಕಳಾದ ಅತುಲ್ ಮತ್ತು ಚಿಯಾನ್ ಅವರು ಚಿತೆಗೆ ಬೆಂಕಿ ಹಚ್ಚಿದರು.
ಕೇಂದ್ರ ಪ್ರವಾಸೋದ್ಯಮ ಸಚಿವ ಶ್ರೀಪಾದ ನಾಯಕ್, ರಾಜ್ಯ ಸರ್ಕಾರದ ಪರವಾಗಿ ಬಂದರು ಸಚಿವ ಅಹಮ್ಮದ್ ದೇವರ್ ಕೋವಿಲ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್‌ವೀರ್ ಚಂದ್ ಪುಷ್ಪಚಕ್ರ ಸಲ್ಲಿಸಿದರು. ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಕಡನ್ನಪಳ್ಳಿ ರಾಮಚಂದ್ರನ್ ಇದ್ದರು.

Discover more from Coastal Times Kannada
Subscribe to get the latest posts sent to your email.








Discussion about this post