ಕಡಬ : ಕಡಬ ತಾಲೂಕಿನ ಕಾಣಿಯೂರು ಸಮೀಪದ ದೋಲ್ಪಾಡಿ ಎಂಬಲ್ಲಿ ಇಬ್ಬರು ಬಟ್ಟೆ ವ್ಯಾಪಾರಿಗಳ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆಯಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಮಾಹಿತಿ ನೀಡಿದ್ದಾರೆ. ಬಂಧಿತರನ್ನು ಪುನಿತ್, ರಾಜು, ಪ್ರಸಾದ್, ಕಿಶೋರ್, ಭವಿತ್, ರಂಜಿತ್ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 144, 341, 504, 323, 324, 427, 149ರಡಿ ಪ್ರಕರಣ ದಾಖಲಾಗಿದೆ. ಈಗಾಗಲೇ ಹಲ್ಲೆಗೊಳಗಾದ ರಮೀಝುದ್ದೀನ್ ಮತ್ತು ರಫೀಕ್ ವಿರುದ್ಧ ಪರಿಶಿಷ್ಟ ಜಾತಿ, ಪಂಗಡ ತಡೆ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 448, 354, 341ರಡಿ ಪ್ರಕರಣ ದಾಖಲಿಸಲಾಗಿದೆ. ಈ ಇಬ್ಬರು ಆರೋಪಿಗಳು ಆಸ್ಪತ್ರೆಯಲ್ಲಿದ್ದು, ಪೊಲೀಸ್ ನಿಗಾದಲ್ಲಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
ಘಟನೆ: ಹಲ್ಲೆಗೊಳಗಾದ ಆರೋಪಿಗಳ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಅತ್ಯಾಚಾರ ಯತ್ನ ದೂರು ದಾಖಲಿಸಿದ್ದರೆ, ಇನ್ನೊಂದೆಡೆ ಈ ಆರೋಪಿಗಳು ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದರು. ಅತ್ಯಾಚಾರ ಯತ್ನ ಆರೋಪಿಗಳ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಡ್ ಶೀಟ್ ಮಾರಾಟಕ್ಕೆ ತೆರಳಿದ್ದ ಮಹಮ್ಮದ್ ರಫೀಕ್ ಮತ್ತು ರಮೀಜುದ್ದೀನ್ ಅವರ ಮೇಲೆ ಕಡಬ ತಾಲ್ಲೂಕಿನ ಕಾಣಿಯೂರಿನಲ್ಲಿ ಬರ್ಬರವಾಗಿ ಹಲ್ಲೆ ನಡೆಸಿ, ಕೊಲೆಯತ್ನ ನಡೆಸಿರುವುದು ಖಂಡನೀಯ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಹೇಳಿದೆ. ನಗರದ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಯುವಕರನ್ನು ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ನೇತೃತ್ವದ ನಿಯೋಗವು ಶನಿವಾರ ಭೇಟಿ ನೀಡಿ ಸಾಂತ್ವನ ಹೇಳಿತು.

Discover more from Coastal Times Kannada
Subscribe to get the latest posts sent to your email.







Discussion about this post