ಮಂಗಳೂರು: ನವೆಂಬರ್ 19ರ ಸಂಜೆ ಮಂಗಳೂರಿನ ನಾಗುರಿಯಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಸಂಘಟನೆ ಹೊತ್ತುಕೊಂಡಿದೆ. ತಾನೇ ಈ ಸ್ಫೋಟದ ರೂವಾರಿ ಎಂದು ಐಆರ್‌ಸಿ ಎಂದು ಕರೆಯಲಾಗುವ ಈ ಸಂಘಟನೆ ಹೇಳಿಕೊಂಡಿದೆ. ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ಗೆ ಕದ್ರಿ ದೇವಸ್ಥಾನ ಸ್ಫೋಟಿಸುವ ಟಾರ್ಗೆಟ್ ಇತ್ತೆಂದು ಸಂಘಟನೆಯೊಂದು ಹೊಣೆ ಹೊತ್ತುಕೊಂಡಿರುವ ಪೋಸ್ಟರ್ ವೈರಲ್ ಆಗಿದೆ.


ಡಾರ್ಕ್ ವೆಬ್ ಮೂಲಕ Instagramನಲ್ಲಿ ಹೀಗೊಂದು ಪೋಸ್ಟ್ ಹಾಕಿರುವ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್, (Islamic Resistance council ) ಎಂಬ ಹೆಸರಿನ ಸಂಘಟನೆಯ ಹೆಸರಿನಲ್ಲಿ ಪೋಸ್ಟರ್ವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಆರೋಪಿ ಶಾರೀಕ್ನ ಎರಡು ಫೋಟೋಗಳನ್ನು ಬಳಸಲಾಗಿದೆ. ಈ ಪೋಸ್ಟರ್ನಲ್ಲಿ ನಮ್ಮ ಟಾರ್ಗೆಟ್ ಕದ್ರಿ ದೇವಸ್ಥಾನ ಆಗಿತ್ತು. ಗುರಿಯನ್ನು ತಲುಪುವ ಮೊದಲೇ ಬಾಂಬ್ ಸ್ಫೋಟಗೊಂಡಿದೆ. ಅಲ್ಲದೆ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ನಿಮ್ಮ ಸಂತೋಷ ಕ್ಷಣಿಕವಾಗಿದೆ ಎಂದು ಬರೆಯಲಾಗಿದೆ.


ವೈರಲ್ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಎಡಿಜಿಪಿ ಅಲೋಕ್ ಕುಮಾರ್, ‘ನಾವು ಸಂಘಟನೆ ಮತ್ತು ಪೋಸ್ಟ್ ಕುರಿತ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ. ನವೆಂಬರ್ 19ರಂದು ಮಂಗಳೂರಿನಲ್ಲಿ ಕುಕ್ಕರ್‌ನೊಂದಿಗೆ ಆಟೋರಿಕ್ಷಾದಲ್ಲಿ ಮೊಹಮ್ಮದ್ ಶಾರಿಕ್ ಪ್ರಯಾಣಿಸುತ್ತಿದ್ದ ವೇಳೆ ಸ್ಫೋಟಗೊಂಡಿದ್ದು, ಶಾರಿಕ್ ಮತ್ತು ಚಾಲಕ ಗಾಯಗೊಂಡಿದ್ದರು. ಪ್ರಾಥಮಿಕ ತನಿಖೆ ನಡೆಸಿದ್ದ ಪೊಲೀಸರು ಇದೊಂದು ಭಯೋತ್ಪಾದಕ ಕೃತ್ಯ ಎಂದು ಸ್ಪಷ್ಟಪಡಿಸಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post