ಮಂಗಳೂರು: ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುಚ್ಚುವುದಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಮತ್ತೆ ನಾಲ್ಕು ದಿನಗಳ ಗಡುವು ನೀಡಿದ್ದಾರೆ. ಸುರತ್ಕಲ್ ಟೋಲ್ ಗೇಟ್ ರದ್ದುಪಡಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ್ 10 ದಿನಗಳು ಉರುಳಿದ ಬಳಿಕವೂ ಅಲ್ಲಿ ವಾಹನಗಳಿಂದ ಸುಂಕ ಸಂಗ್ರಹಿಸುತ್ತಿರುವ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಜಂಟಿ ವೇದಿಕೆಯ ನಿಯೋಗವು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರನ್ನು ಬುಧವಾರ ಭೇಟಿ ಮಾಡಿ ಆಕ್ಷೇಪ ವ್ಯಕ್ತಪಡಿಸಿತು.

‘ನಿಯೋಗವು ವ್ಯಕ್ತಪಡಿಸಿದ ಆಕ್ಷೇಪಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಸುರತ್ಕಲ್ ಟೋಲ್‌ಗೇಟ್‌ನಲ್ಲಿ ವಾಹನಗಳಿಂದ ಸುಂಕ ಸಂಗ್ರಹವನ್ನು ಸ್ಥಗಿತಗೊಳಿಸಲು ಮೂರು ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಲ್ಲಿಯವರೆಗೆ ಸಹಕರಿಸುವಂತೆ ಕೋರಿದ್ದಾರೆ’ ಎಂದು ಜಂಟಿ ವೇದಿಕೆಯ ಪ್ರಕಟಣೆ ತಿಳಿಸಿದೆ.

ಸುರತ್ಕಲ್ ಟೋಲ್ ಗೇಟ್ ರದ್ದತಿಗೆ ಆಗ್ರಹಿಸಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯು ಅ.18ರಂದು ಟೋಲ್‌ಗೇಟ್‌ಗೆ ಮುತ್ತಿಗೆ ಹಾಕಿತ್ತು. ಸುಂಕ ವಸೂಲಿ ಸ್ಥಗಿತಗೊಳಿಸಲು ಆ ಬಳಿಕವೂ ಸರ್ಕಾರ ಕ್ರಮ ಕೈಗೊಳ್ಳದ ಕಾರಣ ಎನ್‌ಐಟಿಕೆ ಪ್ರವೇಶ ದ್ವಾರದ ಬಳಿ ಅ.28ರಿಂದ ಹಗಲು- ರಾತ್ರಿ ಧರಣಿ ನಡೆಸುತ್ತಿದೆ.

ಸುರತ್ಕಲ್ ಟೋಲ್‌ಗೇಟ್ ಅನ್ನು ಹೆಜಮಾಡಿಯ ಟೋಲ್‌ಪ್ಲಾಜಾ ಜೊತೆ ವಿಲೀನಗೊಳಿಸುವ ಕುರಿತು ಕೇಂದ್ರ ಸರ್ಕಾರ ನ.11ರಂದು ಅಧಿಸೂಚನೆ ಹೊರಡಿಸಿತ್ತು. ಈ ಕುರಿತು ನ.14ರಂದು ಟ್ವೀಟ್ ಮಾಡಿದ್ದ ಸಂಸದ ನಳಿನ್ ಕುಮಾರ್ ಕಟೀಲ್, ‘ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದೆ. ಟೋಲ್ ರದ್ದುಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ’ ಎಂದು ತಿಳಿಸಿದ್ದರು.
ವೇದಿಕೆಯ ಅಧ್ಯಕ್ಷ, ಮಾಜಿ ಸಚಿವ ಬಿ. ರಮಾನಾಥ ರೈ, ಸಿಪಿಎಂ ಜಿಲ್ಲಾ ಮುಖಂಡರಾದ ಯಾದವ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಕಾಂಗ್ರೆಸ್ ಪಕ್ಷದ ಶಾಲೆಟ್ ಪಿಂಟೊ, ರಾಜ್ಯ ರೈತ ಸಂಘದ ಓಸ್ವಾಲ್ಡ್ ಫೆರ್ನಾಂಡಿಸ್, ಸನ್ನಿ ಡಿಸೋಜ, ದಲಿತ ಸಂಘರ್ಷ ಸಮಿತಿಯ ಜೆಡಿಎಸ್ ನ ವಸಂತ ಪೂಜಾರಿ, ಎಂ. ದೇವದಾಸ್ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post