ಮಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡು ಸದಾಶಿವ ರಾಯರಂಥವರು ಕಟ್ಟಿದ ಸಹಕಾರಿ ರಂಗದಲ್ಲಿ ಇಂದು ಕರ್ನಾಟಕದಲ್ಲಿರುವ ಉತ್ತುಂಗದ ಹೆಸರು ಡಾ| ರಾಜೇಂದ್ರ ಕುಮಾರ್ ಅವರದ್ದಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಎಸ್ ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ನಡೆದ‘ಸಹಕಾರ ರತ್ನ’ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ 76ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಉದ್ಘಾಟಿಸಿ ಅಭಿನಂದನಾ ಭಾಷಣ ಮಾಡಿದರು.
ಆಗರ್ಭ ಶ್ರೀಮಂತರಾಗಿದ್ದರೂ ತಮ್ಮ ಸರ್ವಸ್ವವನ್ನು ಸ್ವಾತಂತ್ರ್ಯ ಹೋರಾ ಟಕ್ಕೆ ಮುಡಿಪಾಗಿಟ್ಟ ಕಾರ್ನಾಡು ಸದಾಶಿವರಾಯರು, ಸಹಕಾರಿ ಮೇಧಾವಿ ಗಳಾದ ಮೊಳಹಳ್ಳಿ ಶಿವರಾಯರು, ಬಂಟ್ವಾಳ ನಾರಾಯಣ ನಾಯಕರಂತಹ ಧುರೀಣರು ಇಲ್ಲಿನ ಸಹಕಾರಿ ರಂಗವನ್ನು ಬೆಳೆಸಿದವರು ಅಂಥವರ ಸಾಲಿಗೆ ರಾಜೇಂದ್ರ ಕುಮಾರ್ ಕೂಡ ಸೇರುತ್ತಾರೆ ಎಂದು ಹೇಳಿದರು, ಇವರು ಬ್ಯಾಂಕ್ ಅನ್ನು 15 ಸಾವಿರ ಕೋಟಿ ರೂ. ವ್ಯವಹಾರ ಮಾಡುವ ಬ್ಯಾಂಕ್ ಆಗಿ ಪರಿವರ್ತಿಸಿದ್ದಾರೆ. ಇದಕ್ಕಿಂತಲೂ ಹೆಚ್ಚಾಗಿ ಬಡವರ ಬಗ್ಗೆ ರಾಜೇಂದ್ರ ಕುಮಾರ್ ಹೊಂದಿರುವ ಕಳಕಳಿಯ ಕಾರಣ ಅವರ ಪ್ರೀತಿ ವಿಶ್ವಾಸ, ಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಅವರ ಈ ರೀತಿಯ ಸಮಾಜಮುಖಿ ಕೆಲಸಗಳು ಇನ್ನಷ್ಟು ನಡೆಯಲಿ ಸಹಕಾರಿ ರಂಗವನ್ನು ಇನ್ನಷ್ಟು ಎತ್ತರಕ್ಕೆ ಏರಿಸುವಂತಾಗಲಿ ಎಂದು ಶುಭ ಹಾರೈಸಿದರು.
ಹುಟ್ಟು ಹಬ್ಬದ ಅಭಿವಂದನೆ ಸ್ವೀಕರಿಸಿ ಮಾತನಾಡಿದ ಡಾ| ಎಂಎನ್‌ಆರ್ ಅವರು, ಮೊಳಹಳ್ಳಿ ಶಿವರಾಯರು ಹಾಕಿಕೊಟ್ಟ ಭದ್ರಬುನಾದಿ ಯಿಂದ ಇಂದು ಸಹಕಾರ ಕ್ಷೇತ್ರ ರಾಷ್ಟ್ರ ಮಟ್ಟದಲ್ಲೇ ಹೆಸರಾಗಿದೆ. ನಾನು ಸಾಮಾನ್ಯ ಮನುಷ್ಯನಷ್ಟೇ. ಎಲ್ಲರನ್ನು ಸೇರಿಸಿಕೊಂಡು ಕೆಲಸ ಮಾಡಿದ್ದರಿಂದ ಇಂದು ಸಹಕಾರಿ ಕ್ಷೇತ್ರವು ಸಮಗ್ರ ಸುಧಾರಣೆ ಕಂಡಿದೆ ಎಂದರು. ಎಲ್ಲರೂ ಬಲಾಡ್ಯರಾಗಬೇಕು ಎನ್ನುವ ಉದ್ದೇಶದಿಂದ 25 ವರ್ಷ ಹಿಂದೆ ನವೋದಯ ಸ್ವಸಹಾಯ ಸಂಘಗಳನ್ನು ಆರಂಭಿಸಲಾಯಿತು. ಮಹಿಳೆಯರ ಸ್ವಾವಲಂಬಿ ಜೀವನವೇ ಇದರ ಗುರಿ. 3.5 ಲಕ್ಷ ಮಹಿಳೆಯರು ಇದರಲ್ಲಿ ಸಶಕ್ತರಾಗಿದ್ದಾರೆ ಎಂದು ಅವರು ಹೇಳಿದರು.
ಉದ್ಯಮಿ ಡಾ| ಕಣಚೂರು ಮೋನು ಮಾತನಾಡಿ, ರಾಜೇಂದ್ರ ಕುಮಾರ್ ಕಷ್ಟದಲ್ಲಿ ಇರುವವರಿಗೆ ಜಾತಿ, ಧರ್ಮ ನೋಡದೆ ಸಹಾಯ ಮಾಡುವವರು. ನಾನು ತುಸು ಕಷ್ಟದಲ್ಲಿದ್ದಾಗಲೂ ಅವರು ನೆರವಾಗಿದ್ದರು ಎಂದು ಸ್ಮರಿಸಿಕೊಂಡರು.
ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣವನ್ನು ಭೇದಿಸಿ, ತ್ವರಿತವಾಗಿ ಆರೋಪಿಗಳನ್ನು ಬಂಧಿಸಿದ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಹಾಗೂ ಅವರ ತಂಡವನ್ನು ಸಮ್ಮಾನಿಸಿ ಗೌರವಿಸಲಾಯಿತು.ಈ ವೇಳೆ ಮಾತನಾಡಿದ ಅಗರ್‌ವಾಲ್, ಈ ದರೋಡೆ ಪ್ರಕರಣ ಪೊಲೀಸರಿಗೇ ಒಂದು ಕಪ್ಪುಚುಕ್ಕಿಯಾಗಿತ್ತು. ಆದರೆ ನಮ್ಮ ತಂಡ ಚುರುಕಾಗಿ ಪತ್ತೆ ಮಾಡಿದೆ. ಪೊಲೀಸರನ್ನು ಎಲ್ಲರೂ ಟೀಕಿಸುವಾಗ ಈ ರೀತಿ ಪ್ರೋತ್ಸಾಹದ ನಡೆ ನಿಜಕ್ಕೂ ಅಭಿನಂದನೀಯ. ಸಹಕಾರಿ ಬ್ಯಾಂಕ್‌ಗಳು ಮುಂದೆ ಸುರಕ್ಷೆಯ ಕ್ರಮಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಯಾವುದೇ ರಾಜಿ ಮಾಡಬಾರದು ಎಂದರು.
ರಾಜೇಶ್ ಕೆ.ಸಿ. ನಿರೂಪಿಸಿದರು. ನಿರ್ದೇಶಕ ಐಕಳಬಾವ ಬೆಳಪು ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ವಂದಿಸಿದರು.ಇದೇ ವೇಳೆ 56 ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಲಾಯಿತು.
Discover more from Coastal Times Kannada
Subscribe to get the latest posts sent to your email.
Discussion about this post