ತಿರುವನಂತಪುರಂ, ಫೆ 25: ಯುವಕನೊಬ್ಬ ತನ್ನ ಕುಟುಂಬ ಸದಸ್ಯರು ಹಾಗೂ ಪ್ರೇಯಸಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. 23 ವರ್ಷದ ಯುವಕ ಅಫಾನ್ ಪೊಲೀಸರಿಗೆ ಶರಣಾಗಿದ್ದಾನೆ. ಆತ ಪೊಲೀಸ್ ಠಾಣೆಗೆ ಹೋಗಿ ಐವರು ಕುಟುಂಬ ಸದಸ್ಯರು ಮತ್ತು ಗೆಳತಿ ಸೇರಿದಂತೆ ಆರು ಜನರನ್ನು ಕ್ರೂರವಾಗಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ತಿರುವನಂತಪುರದ ವೆಂಜರಮೂಡ್ ನಿವಾಸಿ ಅಫಾನ್ (23) ಸಾಮೂಹಿಕ ನರಮೇಧ ನಡೆಸಿರುವ ತಲೆಗೆಟ್ಟ ಯುವಕ. ಸೋಮವಾರ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯ ನಡುವೆ 26 ಕಿಮೀ ಆಸುಪಾಸಿನಲ್ಲಿ ಬೈಕಿನಲ್ಲಿ ಸುತ್ತಾಡಿ ಬೇರೆ ಬೇರೆ ಮನೆಗಳಿಗೆ ತೆರಳಿ ತನ್ನ ಅತ್ಯಾಪ್ತರನ್ನೇ ಕೊಂದು ಹಾಕಿದ್ದಾನೆ. ಮೊದಲಿಗೆ, ಅಜ್ಜಿ 80 ವರ್ಷದ ಸಲ್ಮಾ ಬೀವಿಯನ್ನು ಸುತ್ತಿಗೆಯಲ್ಲಿ ಬಡಿದು ಕೊಂದಿದ್ದಾನೆ. ಆನಂತರ, ಅಲ್ಲಿಂದ 9 ಕಿಮೀ ದೂರದ ಮಾವನ ಮನೆಗೆ ತೆರಳಿದ್ದು, ಅಲ್ಲಿ ಮಾವ ಲತೀಫ್, ಅವರ ಪತ್ನಿ ಶಾಹಿದಾ ಅವರನ್ನು ಸುತ್ತಿಗೆ ಮತ್ತು ಚೂರಿಯಿಂದ ತಿವಿದು ಕೊಂದು ಹಾಕಿದ್ದಾನೆ.
ಆನಂತರ, ತನ್ನ ಮನೆಗೆ ಬಂದು ಕಿರಿಯ ಸೋದರ 13 ವರ್ಷದ ಅಹ್ಸಾನನ್ನು ಬೈಕಿನಲ್ಲಿ ಹೊರಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಆತನ ಫೇವರಿಟ್ ಫುಡ್ ಅರೇಬಿಯನ್ ಖಾದ್ಯಗಳನ್ನು ತೆಗೆದುಕೊಟ್ಟು ತಿನ್ನಿಸಿದ್ದಾನೆ. ಮನೆಗೆ ಹಿಂತಿರುಗಿ ಬಂದು ಸುತ್ತಿಗೆಯಿಂದ ಅಪ್ರಾಪ್ತ ಸೋದರನ ತಲೆಗೆ ಬಡಿದು ಕೊಂದಿದ್ದಾನೆ, ಆನಂತರ, ಕ್ಯಾನ್ಸರ್ ರೋಗಿಯಾಗಿರುವ ತನ್ನ ತಾಯಿಗೂ ಹಲ್ಲೆ ಮಾಡಿದ್ದಾನೆ. ಆದರೆ ತಾಯಿ ಜೀವನ್ಮರಣ ಸ್ಥಿತಿಯಲ್ಲಿ ಬದುಕುಳಿದಿದ್ದಾರೆ. ಇದರ ನಡುವೆ, ತನ್ನ ಪ್ರಿಯತಮೆ ಫರ್ಸಾನಾ ಮನೆಗೆ ಹೋಗಿ ಆಕೆಗೂ ಹಲ್ಲೆಗೈದು ಕೊಂದಿದ್ದಲ್ಲದೆ, ಆಕೆಯ ಮನೆಯಲ್ಲಿದ್ದ ಎಲ್ ಪಿಜಿ ಸಿಲಿಂಡರನ್ನು ಓಪನ್ ಮಾಡಿಟ್ಟು ಹೊರಗೆ ಬಂದಿದ್ದಾನೆ.
ತಾಯಿಯನ್ನು ಹೊರತುಪಡಿಸಿ ಎಲ್ಲರೂ ಸಾವನ್ನಪ್ಪಿದ್ದಾರೆ : ಪೊಲೀಸರು ಬರುವ ಮೊದಲೇ ಅಫಾನ್ ಅವರ ತಾಯಿ ಹೊರತುಪಡಿಸಿ ಎಲ್ಲರೂ ಸಾವನ್ನಪ್ಪಿದ್ದರು. ಅವರ ತಾಯಿ ಶೆಮಿ ಅವರ ಸ್ಥಿತಿ ಗಂಭೀರವಾಗಿದೆ. ಅವರು ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರು ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಕ್ರೂರ ಹತ್ಯೆಗಳಿಗೆ ಕಾರಣಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ ವಿಷ ಸೇವನೆ ಮಾಡಿರುವುದರಿಂದ ಆರೋಪಿ ಅಫಾನ್ ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೀಗಾಗಿ ಯಾಕಾಗಿ ಇಂತಹ ಸಾಮೂಹಿಕ ಹತ್ಯೆಗೆ ಕಾರಣವಾಗಿದ್ದಾನೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಸ್ಥಳೀಯರು ಹೇಳುವ ಪ್ರಕಾರ, ಯುವಕ ಭಾರೀ ಸೌಮ್ಯ ಸ್ವಭಾವದವನಾಗಿದ್ದು, ಇಂತಹ ಕೃತ್ಯ ಎಸಗಿದ್ದಾನೆಂದು ನಂಬುವುದಕ್ಕೂ ಆಗಲ್ಲ ಎನ್ನುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post