ಒಡಿಶಾ: ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಒಡಿಶಾದ ಗಣಿ ಇಲಾಖೆಯ ಉಪ ನಿರ್ದೇಶಕರ ನಿವಾಸದ ಮೇಲೆ ದಾಳಿ ನಡೆಸಿರುವ ಜಾಗೃತ ದಳ ಅಧಿಕಾರಿಗಳು 4 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಇದು ರಾಜ್ಯ ಜಾಗೃತ ದಳದ ಇತಿಹಾಸದಲ್ಲೇ ನಡೆದ ಅತಿದೊಡ್ಡ ನಗದು ಜಪ್ತಿ ಕಾರ್ಯಾಚರಣೆ ಎಂದು ಹೇಳಲಾಗಿದೆ.
ಒಡಿಶಾದ ಕಟಕ್ ವಲಯದ ಗಣಿ ಉಪ ನಿರ್ದೇಶಕ ದೇಬಬ್ರತ ಮೊಹಂತಿ ಎಂಬುವವರು ಮಂಗಳವಾರ ರಾತ್ರಿ ಕಲ್ಲಿದ್ದಲು ಮಾರಾಟಗಾರರಿಂದ 30,000 ರೂ. ಲಂಚ ಸ್ವೀಕರಿಸುತ್ತಿದ್ದಾಗ ವಿಚಕ್ಷಣ ದಳದ ಬಲೆಗೆ ಬಿದ್ದಿದ್ದರು. ಕಲ್ಲಿದ್ದಲು ಡಿಪೋ ಕಾರ್ಯಾಚರಣೆ ಮತ್ತು ಸಾರಿಗೆ ಅನುಮತಿ ನೀಡಲು ಅವರು ಈ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಪಡೆಯುವಾಗಲೇ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮೊಹಂತಿಯನ್ನು ಬಂಧಿಸಿದ ಅಧಿಕಾರಿಗಳು, ತಕ್ಷಣವೇ ಭುವನೇಶ್ವರದ ಪಟಿಯಾ ಪ್ರದೇಶದಲ್ಲಿರುವ ಅವರ ಫ್ಲ್ಯಾಟ್ ಮೇಲೆ ದಾಳಿ ನಡೆಸಿದರು. ಅಲ್ಲಿ ಕಂಡ ದೃಶ್ಯ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ.

ಟ್ರಾಲಿ ಬ್ಯಾಗ್, ಅಲ್ಮೇರಾಗಳಲ್ಲಿ ಕೋಟಿ ಕೋಟಿ ಹಣ : ಗಣಿ ಅಧಿಕಾರಿಯ ಬಂಧನದ ಬಳಿಕ ಇಂದು (ಬುಧವಾರ) ಮೊಹಂತಿ ಅವರಿಗೆ ಸೇರಿದ ಮೂರು ಪ್ರಮುಖ ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಯಿತು. ಭುವನೇಶ್ವರದ ಶ್ರೀವಿಹಾರ್ ನೇಚರ್ಸ್ ಅಪಾರ್ಟ್‌ಮೆಂಟ್‌ನ ಫ್ಲಾಟ್ ಸಂಖ್ಯೆ 302 ರಲ್ಲಿ ತಪಾಸಣೆ ನಡೆಸಿದಾಗ, ಟ್ರಾಲಿ ಬ್ಯಾಗ್‌ಗಳು ಮತ್ತು ಕಪಾಟುಗಳಲ್ಲಿ ಬಚ್ಚಿಟ್ಟಿದ್ದ 4 ಕೋಟಿ ರೂಪಾಯಿಗೂ ಅಧಿಕ ನಗದು ಪತ್ತೆಯಾಗಿದೆ. ಅಧಿಕಾರಿಗಳು ಸಿಕ್ಕ ಹಣವನ್ನು ಎಣಿಸಲು ಯಂತ್ರಗಳನ್ನು ಬಳಸುತ್ತಿದ್ದಾರೆ.
ಅಧಿಕಾರಿಯ ಮನೆಯಲ್ಲಿ 4 ಕೋಟಿ ರೂಪಾಯಿ ಪತ್ತೆಯಾಗುವುದರ ಜೊತೆಗೆ, ಅವರ ಕಚೇರಿ ಡ್ರಾಯರ್‌ನಿಂದ 1.20 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಇದಲ್ಲದೇ, ಭುವನೇಶ್ವರದ ಪಹಲಾದಲ್ಲಿ ಎರಡು ಅಂತಸ್ತಿನ ಮನೆ ಮತ್ತು ಸುಮಾರು 130 ಗ್ರಾಂ ಚಿನ್ನಾಭರಣಗಳು ಮೊಹಂತಿಗೆ ಸೇರಿದ್ದು ಎಂದು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಭುವನೇಶ್ವರ ವಿಜಿಲೆನ್ಸ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಮೇಲೆ ದೇವಬ್ರತ್ ಮೊಹಂತಿ ಮೇಲೆ ತನಿಖೆ ತೀವ್ರಗೊಳಿಸಲಾಗಿದೆ. ದಾಳಿ ಪ್ರಕ್ರಿಯೆ ಇನ್ನೂ ಮುಂದುವರೆದಿದ್ದು, ಆಸ್ತಿಯ ಒಟ್ಟು ಮೌಲ್ಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
“ದೇಬಬ್ರತ್ ಮೊಹಂತಿ ಅವರನ್ನು ವಿಜಿಲೆನ್ಸ್ ನಿರ್ದೇಶನಾಲಯ ಬಂಧಿಸಿದೆ. ಇಂದು ಸಂಜೆಯೊಳಗೆ ಭುವನೇಶ್ವರ ವಿಶೇಷ ವಿಜಿಲೆನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈ ಬಗ್ಗೆ ನಾವು ಪ್ರಕ್ರಿಯೆ ಪ್ರಾರಂಭಿಸಿದ್ದೇವೆ. ಪರಿಶೀಲನೆ ಪೂರ್ಣಗೊಂಡ ಬಳಿಕ ಮೊಹಂತಿಯವರ ಸ್ಥಿರ ಮತ್ತು ಚರಾಸ್ತಿಗಳ ವಿವರವಾದ ಮೌಲ್ಯಮಾಪನ ನಡೆಸಲಾಗುವುದು” ಎಂದು ಭುವನೇಶ್ವರ ವಿಜಿಲೆನ್ಸ್ ವಿಭಾಗದ ಎಸ್ಪಿ ಸರೋಜ್ ಕುಮಾರ್ ಸಮಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post