ಮಂಗಳೂರು, ಫೆ.24: ಸ್ಪೀಕಿಂಗ್ ಇನ್ನಿತರ ಕೌಶಲ್ಯ ತರಬೇತಿ ನೀಡುವ ನಗರದ ಪ್ರತಿಷ್ಠಿತ ಸಂಸ್ಥೆಯೊಂದರ ಮಾಲೀಕರಿಗೆ ಅವರದ್ದೇ ಮಾರ್ಫ್ ಮಾಡಿದ ವೀಡಿಯೋಗಳನ್ನು ಮುಂದಿಟ್ಟು ಬರೋಬ್ಬರಿ ಎರಡು ಕೋಟಿ ರೂ.ಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಅದೇ ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬನನ್ನು ಉರ್ವಾ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ಮೂಲದ ಅಭಿಷೇಕ್ ಸುರೇಂದ್ರ ಪೂಜಾರಿ ಬಂಧಿತ ಆರೋಪಿ. ಸಂಸ್ಥೆಯ ಮಾಲೀಕರ ಪುತ್ರಿ ನೀಡಿದ ದೂರಿನಂತೆ ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಆರೋಪಿ ಅಭಿಷೇಕ್ ಸಂಸ್ಥೆಯ ಮಾಲೀಕರನ್ನು ನಮ್ಮ ತರಬೇತಿಗೆ ದುಬೈನಲ್ಲಿ ಹೆಚ್ಚಿನ ಬೇಡಿಕೆಯಿದೆ ಎಂದು ನಂಬಿಸಿ ಎರಡು ವರ್ಷಗಳ ಹಿಂದೆ ದುಬೈಗೆ ಕರೆದುಕೊಂಡು ಹೋಗಿದ್ದ. ಆದರೆ, ಅಲ್ಲಿ ಬೇಡಿಕೆ ಇಲ್ಲದಿರುವುದು ಮತ್ತು ಆರೋಪಿಯ ಶಂಕಾಸ್ಪದ ವರ್ತನೆಯನ್ನು ಗಮನಿಸಿ ಸ್ವಲ್ಪ ಸಮಯದ ಬಳಿಕ ವಾಪಸಾಗಿದ್ದರು.
ದುಬೈನಲ್ಲಿದ್ದಾಗಲೇ ಆರೋಪಿ ಅಭಿಷೇಕ್, ಮಾಲೀಕರ ಖಾಸಗಿ ವೀಡಿಯೋ ಮಾಡಿದ್ದಲ್ಲದೆ, ಆನಂತರ ಅದನ್ನು ತೋರಿಸಿ ಬ್ಲಾಕ್ಮೇಲ್ ಮಾಡಲು ತೊಡಗಿದ್ದ. ಇದಲ್ಲದೆ, ‘ನಿಮ್ಮ ಪುತ್ರಿಯ ಖಾಸಗಿ ವೀಡಿಯೋ ಕೂಡ ನನ್ನ ಬಳಿ ಇದೆ’ ಎಂದು ಹೇಳಿ ಬೆದರಿಸಿ ಹಣದ ಬೇಡಿಕೆ ಇರಿಸಿದ್ದ. ಈ ವೀಡಿಯೋಗಳನ್ನು ಡಿಲೀಟ್ ಮಾಡಲು 2 ಕೋಟಿ ರೂ.ಗಳನ್ನು ತನ್ನ ಪತ್ನಿ ಶ್ರೀನಿಧಿ ಪಟ್ಲ ಖಾತೆಗೆ ವರ್ಗಾಯಿಸುವಂತೆ ಡಿಮ್ಯಾಂಡ್ ಮಾಡಿದ್ದ.
ಹಣ ಸಿಗದಿದ್ದಾಗ ಕಳೆದ ಡಿಸೆಂಬರ್ ತಿಂಗಳಲ್ಲಿ ಮಾಲೀಕರ ಪುತ್ರಿಯನ್ನು ಸಂಪರ್ಕಿಸಿದ ಆರೋಪಿ, 2 ಕೋಟಿ ರೂ. ನೀಡದಿದ್ದರೆ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದ. ಅಲ್ಲದೆ, ಮಾಲೀಕರ ಖಾಸಗಿ ವೀಡಿಯೋಗಳನ್ನು ಮಾರ್ಫ್ ಮಾಡಿ ಮಂಗಳೂರು ಹಾಗೂ ಉಡುಪಿಯ ಕೆಲವು ಕಾಲೇಜುಗಳ ಪ್ರಾಂಶುಪಾಲರಿಗೆ ವಾಟ್ಸಪ್‌ನಲ್ಲಿ ಕಳುಹಿಸಿದ್ದ. ಬ್ಲಾಕ್ಮೇಲ್ ಮಿತಿ ಮೀರಿದಾಗ ನೊಂದ ಮಾಲೀಕರ ಪುತ್ರಿ ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಯ ಪತ್ನಿ ಶ್ರೀನಿಧಿ ವಿರುದ್ಧವೂ ದೂರು ದಾಖಲಾಗಿದ್ದು, ಕೃತ್ಯದಲ್ಲಿ ಆಕೆಯ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post