ಮಂಗಳೂರು: ಭಯೋತ್ಪಾದನೆಗೆ ಧರ್ಮ ಇಲ್ಲ ಎನ್ನುವ ಕಾಂಗ್ರೆಸಿಗರು ಈಗ ರಾಹುಲ್ ಗಾಂಧಿ ವಿರುದ್ಧ ತೀರ್ಪು ಬಂದಾಗ ಇಡೀ ನ್ಯಾಯಾಧೀಶರ ಸಮುದಾಯವನ್ನೇ ಭ್ರಷ್ಟರಂತೆ ಬಿಂಬಿಸುತ್ತಿರುವುದು ಆತಂಕಕಾರಿ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯ ಸಭಾ ಸದಸ್ಯ ಸುಧಾಂಶು ತ್ರಿವೇದಿ ಹೇಳಿದ್ದಾರೆ. ರಾಹುಲ್ ಗಾಂಧಿ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದು ಇದು ಮೊದಲಲ್ಲ. ಕಾಂಗ್ರೆಸ್ ನೈತಿಕವಾಗಿ, ರಾಜಕೀಯವಾಗಿ ಮಾತ್ರವಲ್ಲ, ಈಗ ಕಾನೂನುರೀತ್ಯಾ ಕೂಡ ಸೋತಿದೆ ಎಂದು ಅವರು ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದಿನ ಕಾಂಗ್ರೆಸ್ ಸರ್ಕಾರವು ಎಸ್‌ಡಿಪಿಐನ 160 ಪ್ರಕರಣಗಳನ್ನು ಮುಕ್ತಾಯಗೊಳಿಸಿ, 200 ಜನರನ್ನು ಆರೋಪಮುಕ್ತಗೊಳಿಸಿದೆ. ಝಾಕೀರ್ ನಾಯಕ್, ಅಫ್ಜಲ್ ಗುರು, ಯಾಕೂಬ್ ಮೆನನ್ ಅವರಂತಹವರನ್ನು ಹೊಗಳುವ ಮೂಲಕ ರಕ್ಷಣೆ ಮಾಡಿದೆ. ಇದು ಕಾಂಗ್ರೆಸ್ ಎಲ್ಲಿದ್ದರೂ, ಯಾವ ಕಾಲದಲ್ಲೂ ತನ್ನ ಸ್ವಭಾವ ಬದಲಾಯಿಸಲಾರದು ಎಂಬುದನ್ನು ತೋರಿಸುತ್ತದೆ’ ಎಂದರು.
‘ಲಂಚ ಕೊಡುವುದು, ಲಂಚ ಪಡೆಯುವಷ್ಟೇ ಅಪರಾಧವಾಗಿದೆ. ರಾಜ್ಯ ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿರುವವರು, ತಾಂತ್ರಿಕವಾಗಿ ಅದನ್ನು ಬಹಿರಂಗಗೊಳಿಸಿ, ಸೂಕ್ತ ದೂರು ನೀಡಬೇಕು. ಇಲ್ಲಿದ್ದರೆ ಅವರೇ ಅಪರಾಧವನ್ನು ಮರೆಮಾಚಲು ಯತ್ನಿಸಿದಂತಾಗುತ್ತದೆ. ಈ ನಡುವೆ ಕಾಂಗ್ರೆಸ್ ಯಾಕೆ ಭ್ರಷ್ಟ ಗುತ್ತಿಗೆದಾರರ ಬಗ್ಗೆ ಕನಿಕರ ತೋರುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
‘ಕಾಂಗ್ರೆಸ್ ಶೇ85ರ ಕಮಿಷನ್ ಪಕ್ಷವಾಗಿದೆ. ಹಿಂದೆ ಪ್ರಧಾನಿಯಾಗಿದ್ದ ದಿವಂಗತ ರಾಜೀವ್ ಗಾಂಧಿ ಅವರು ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಫಲಾನುಭವಿಗೆ ತಲುಪುತ್ತದೆ ಎಂದಿದ್ದರು. ಕಾಂಗ್ರೆಸ್‌ನ ಕಮಿಷನ್ ಕಾರ್ಡ್ ಆಗಲೇ ಬಹಿರಂಗಗೊಂಡಿದೆ. ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷ ಪ್ರತಿ ತಿಂಗಳು ₹3,000 ಭತ್ಯೆ ನೀಡುವ ಯುವ ಗ್ಯಾರೆಂಟ್ ಕಾರ್ಡ್ ಅನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದೆ. ಆದರೆ, ರಾಜಸ್ಥಾನದಲ್ಲಿ ಇದನ್ನು ಘೋಷಿಸಿದ್ದ ಕಾಂಗ್ರೆಸ್ ಈವರೆಗೂ ಅದನ್ನು ನೀಡಿಲ್ಲ’ ಎಂದು ಟೀಕಿಸಿದರು.
‘ನೀಡಿದ ಭರವಸೆಯನ್ನು ಈಡೇರಿಸಲು ಸಾಧ್ಯವಾಗದ ಕಾಂಗ್ರೆಸ್ ಕರ್ನಾಟಕದಲ್ಲಿ ಮತ್ತೆ ಗ್ಯಾರೆಂಟಿಯ ಭರವಸೆ ನೀಡಿದೆ. ಬಿಜೆಪಿ ತಾನು ಹೇಳಿದನ್ನು ಮಾಡಿ ತೋರಿಸಿದೆ. ಹೀಗಾಗಿ, ಕರ್ನಾಟಕದ ಜನರು ಬಿಜೆಪಿಯ ಮೇಲೆ ಭರವಸೆ ಹೊಂದಿದ್ದಾರೆ’ ಎಂದರು.
ಬೊಮ್ಮಾಯಿ ಉತ್ತಮ ಕೆಲಸ ಮಾಡಿದ್ದಾರೆ. ಹಾಗಾಗಿ ಸದ್ಯಕ್ಕೆ ಅವರೇ ಸಿಎಂ ಅಭ್ಯರ್ಥಿ ಎಂದರು. ಕಾಂಗ್ರೆಸ್ ಹಲವು ಉಚಿತ ಯೋಜನೆಗಳನ್ನು ಘೋಷಿಸಿರಬಹುದು, ಆದರೆ ಹೇಳಿದ್ದನ್ನು ಯಾವತ್ತಿಗೂ ಈಡೇರಿಸಿಲ್ಲ. ರಾಜಸ್ಥಾನ, ಛತ್ತೀಸಗಢದಲ್ಲೂ ಹೇಳಿದ್ದನ್ನು ಪಾಲಿಸಿಲ್ಲ ಎಂದರು. ರಾಜ್ಯ ವಕ್ತಾರ ಕ್ಯಾ| ಗಣೇಶ್ ಕಾರ್ಣಿಕ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ., ರವಿಶಂಕರ ಮಿಜಾರ್, ಜಗದೀಶ್ ಶೇಣವ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post