ಸುಳ್ಯ: ಪಟ್ಟಣದ ಗುರುಂಪು ಎಂಬಲ್ಲಿ ಗುಡ್ಡ ಕುಸಿದು, ಒಬ್ಬ ಮಹಿಳೆ ಸೇರಿದಂತೆ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಶನಿವಾರ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಮಣ್ಣಿನಿಂದ ಮೂವರು ಕಾರ್ಮಿಕರ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಮೃತರಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇಗೊಡ್ಡೆಟ್ಟಿ ಸೋಮಶೇಖರ್ ರೆಡ್ಡಿ (45), ಅವರ ಪತ್ನಜ ಶಾಂತಕ್ಕ (35), ಇನ್ನೊರ್ವ ಮೃತ ಹೆಸರು ಗುರುತು, ವಿಳಾಸ ತಿಳಿದುಬಂದಿಲ್ಲ.

ಅಬೂಬಕ್ಕರ್ ಎಂಬವರ ಮನೆಯ ಹಿಂದೆ ಬೃಹತ್ತಾದ ಗುಡ್ಡವನ್ನು ಕಡಿಯಲಾಗಿತ್ತು. ಅದರ ಕೆಳಗೆ ಪಿಲ್ಲರ್ ಹಾಕಿ ತಡೆಗೋಡೆ ನಿರ್ಮಿಸುವ ಕಾಮಗಾರಿ ನಡೆಯುತ್ತಿತ್ತು. ಮೂವರು ಕಾರ್ಮಿಕರು ಈ ಕೆಲಸದಲ್ಲಿ ನಿರತರಾಗಿದ್ದರು. ಆಗ ಮೇಲಿನಿಂದ ಗುಡ್ಡದ ಮಣ್ಣು ಕುಸಿದು ಬಿದ್ದು, ಕಾರ್ಮಿಕರು ಅದರಡಿ ಸಿಲುಕಿದರು. ಪಕ್ಕದಲ್ಲಿಯೇ ಕೆಲಸ ಮಾಡುತ್ತಿದ್ದ ಇನ್ನೊಂದು ಜೆಸಿಬಿಯನ್ನು ತರಿಸಿ ಮಣ್ಣನನ್ನು ತೆರವುಗೊಳಿಸಲಾಯಿತು. ಒಂದೂವರೆ ಗಂಟೆಯ ಕಾರ್ಯಾಚರಣೆ ಬಳಿಕ ಮೂವರ ದೇಹಗಳನ್ನು ಹೊರತೆಗೆಯಲಾಗಿತ್ತು. ಆದರೆ ಅಷ್ಟರಲ್ಲಿ ಕಾರ್ಮಿಕರು ಅಸುನೀಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೃತದೇಹಗಳನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.


ಘಟನೆ ನಡೆದ ಸ್ಥಳಕ್ಕೆ ಸಚಿವ ಎಸ್.ಅಂಗಾರ, ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ, ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಸದಸ್ಯರಾದ ಕೆ.ಎಸ್.ಉಮ್ಮರ್, ಶರೀಫ್ ಕಂಠಿ, ರಿಯಾಝ್ ಕಟ್ಟೆಕ್ಕಾರ್, ಸುಶೀಲಾ ಜಿನ್ನಪ್ಪ, ತಹಶೀಲ್ದಾರ್ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ನಗರ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಭೇಟಿ ನೀಡಿದರು.
Discover more from Coastal Times Kannada
Subscribe to get the latest posts sent to your email.







Discussion about this post