ಮಂಗಳೂರು: ಮಹಿಳೆಯೋರ್ವಳು ಚಿನ್ನವನ್ನು ಖರೀದಿಸು ವಂತೆ ವ್ಯವಹರಿಸಿ ಅನಂತರ ಹಣ ಪಾವತಿಸದೆ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು ಈಕೆ ಇದೇ ರೀತಿ ಹಲವೆಡೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಲಪಟಾಯಿಸಿರುವುದು ಗೊತ್ತಾಗಿದೆ. ಫರೀದಾ ಪ್ರಕರಣದ ಆರೋಪಿ.
ಪ್ರರಣದ ವಿವರ : ಮಾ. 25ರಂದು ಕಾವೂರಿನಲ್ಲಿರುವ ಚಿನ್ನದ ಅಂಗಡಿಯ ಮಾಲಕರಿಗೆ ಕರೆ ಮಾಡಿದ ಫರೀದಾ ತಾನು ಕುಂಜತ್‌ಬೈಲ್‌ನವಳಾಗಿದ್ದು ಮಗುವಿನ ನಾಮಕರಣಕ್ಕೆ ಚಿನ್ನದ ಒಂದು ಬ್ರಾಸ್‌ಲೆಟ್, ಒಂದು ಚೈನ್, ಎರಡು ಉಂಗುರ ಬೇಕಾಗಿದೆ. ವಾಟ್ಸ್‌ಆ್ಯಪ್‌ನಲ್ಲಿ ಡಿಸೈನ್ ಕಳುಹಿಸಿ. ನಾನು ಆಯ್ಕೆ ಮಾಡಿ ನಿಮಗೆ ಹಣವನ್ನು ನೆಫ್ಟ್ ಮಾಡುತ್ತೇನೆ ಎಂದಿದ್ದಳು. ಅಂಗಡಿ ಮಾಲಕರು ಅಂತೆಯೇ ಮಾಡಿದ್ದರು. ಆಗ ಫರೀದಾ “ಒಂದು ಚೈನ್, ಒಂದು ಬ್ರಾಸ್‌ಲೆಟ್ ಮತ್ತು ಎರಡು ಉಂಗುರಗಳನ್ನು ಆಯ್ಕೆ ಮಾಡಿ ಮರುದಿನ ಕರೆ ಮಾಡಿ ಹಣವನ್ನು ನೆಫ್ಟ್ ಮೂಲಕ ಕಳುಹಿಸುತ್ತೇನೆ. ಆಯ್ಕೆ ಮಾಡಿದ ಚಿನ್ನವನ್ನು ಹಿಯಾಜ್ ಕೆ.ಎಸ್. ಎಂಬ ಹುಡುಗನಲ್ಲಿ ಕಳುಹಿಸಿಕೊಡಿ’ ಎಂದಳು.
ಅದರಂತೆಯೇ ಹಿಯಾಜ್‌ನನ್ನು ಅಂಗಡಿಗೆ ಕಳುಹಿಸಿ ಬ್ಯಾಂಕ್‌ನ 1.36 ಲ.ರೂ. ಮೊತ್ತದ ಡಿಪಾಸಿಟ್ ಪೇ ಸ್ಲಿಪ್ ಅನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ್ದಳು. ಆದರೆ ಹಣ ಮಾಲಕರ ಖಾತೆಗೆ ಜಮೆಯಾಗಿರಲಿಲ್ಲ. ಈ ಬಗ್ಗೆ ಅವರು ತಿಳಿಸಿದಾಗ ಫರೀದಾ “ಸರ್ವರ್ ಸ್ಲೋ ಇದೆ. 30 ನಿಮಿಷದಲ್ಲಿ ಜಮೆಯಾಗುತ್ತದೆ. ಹುಡುಗನಲ್ಲಿ ಚಿನ್ನವನ್ನು ಕೊಡಿ’ ಎಂದಳು. ನಂಬಿದ ಮಾಲಕರು ಚಿನ್ನಾಭರಣಗಳನ್ನು ಕಳುಹಿಸಿಕೊಟ್ಟಿದ್ದರು. ಅದೇ ದಿನ ಸಂಜೆ ಮಾಲಕರು ಫರೀದಾಗೆ ಕರೆ ಮಾಡಿ ಹಣ ಬಂದಿಲ್ಲ ಎಂದರು. ಆಗಲೂ ಸರ್ವರ್ ಸಮಸ್ಯೆ ಇರಬಹುದು. ನಾಳೆ ಅಂಗಡಿಗೆ ಬಂದು ಹಣವನ್ನು ನೀಡುತ್ತೇನೆ ಎಂದು ಉತ್ತರಿಸಿದ್ದಳು. ಮರುದಿನ ಹಣ ಕೇಳಿದಾಗ ನಿಮಗೇನು ಅವಸರ, ಕೊಡುತ್ತೇನೆ ಎಂದು ಬೆದರಿಸಿದ್ದಳು. ಮಾಲಕರು ಬರಬೇಕಾದ ಹಣವನ್ನು ಪದೇ ಪದೆ ಕೇಳಿದಾಗ ಫರೀದಾ ಕೊಡಬೇಕಾದ 1.36 ಲಕ್ಷ ರೂ. ಹಣವನ್ನು ನೀಡದೆ ಬೆದರಿಕೆ ಹಾಕಿದ್ದಾಳೆ ಎಂದು ಚಿನ್ನದ ಅಂಗಡಿಯ ಮಾಲಕ ಕಾವೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಹಲವರಿಗೆ ವಂಚನೆ: ಫರೀದಾ ಇದೇ ರೀತಿ ವಂಚಿಸಿರುವ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಇತ್ತೀಚೆಗೆ ಈಕೆಯ ಬಗ್ಗೆ ಸ್ನೇಹಿತರಲ್ಲಿ ವಿಚಾರಿಸಿದಾಗ ಕೊಂಚಾಡಿ, ಕಿನ್ನಿಗೋಳಿ, ಶಿರ್ವ, ಮೂಡುಬಿದಿರೆ, ಗುರುಪುರ ಮೊದಲಾದ ಕಡೆಗಳಲ್ಲಿ ಇದೇ ರೀತಿ ಮಾತಿನ ಮೋಡಿ ಮಾಡಿ ನಂಬಿಸಿ ಮೋಸದಿಂದ ಚಿನ್ನವನ್ನು ಲಪಟಾಯಿಸಿಕೊಂಡು ಹೋಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post