ಮಂಗಳೂರು ,ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆಯ ಮಧ್ಯಭಾಗದಲ್ಲಿನ ಬೃಹತ್ ಗಾತ್ರದ ಹೊಂಡಕ್ಕೆ ಬಿದ್ದು ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿಯ ಬಲಗೈ ಮೂಳೆ ಮುರಿದಿದೆ. ಘಟನೆಯಿಂದ ಮುಂದಿನ ತಿಂಗಳು ನಡೆಯಲಿರುವ ಯುಜಿಸಿ ಪರೀಕ್ಷೆ ಹಾಗೂ ಆಂತರಿಕ ಪರೀಕ್ಷೆ ಬರೆಯಲು ಸಾಧ್ಯವಾಗದೆ ಇರುವುದರಿಂದ ವಿದ್ಯಾರ್ಥಿನಿ ಆತಂಕಕ್ಕೆ ಒಳಗಾಗಿದ್ದಾರೆ. ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ವಿಭಾಗದ ದ್ವಿತೀಯ ವರ್ಷದ ಎಂಎಸ್ಸಿ ವಿದ್ಯಾರ್ಥಿನಿ ಕೊಟ್ಟಾರ ನಿವಾಸಿ ನಿಶ್ಮಿತಾ (19) ಗಾಯಗೊಂಡವರು. ಜು.22 ರಂದು ಸಂಜೆ ಕೊಣಾಜೆ ಕಡೆಯಿಂದ ಮಂಗಳೂರಿಗೆ ತಮ್ಮ ಸ್ಕೂಟಿಯಲ್ಲಿ ತೆರಳುವ ಸಂದರ್ಭ ಜೋರಾಗಿ ಮಳೆಯಾಗುತ್ತಿತ್ತು. ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆಯಲ್ಲಿ ಪ್ರಯಾಣಿಸುವ ಸಂದರ್ಭ ಸೇತುವೆ ಮಧ್ಯಭಾಗದಲ್ಲಿ ಬೃಹತ್ ಗಾತ್ರದ ಹೊಂಡಕ್ಕೆ ಸ್ಕೂಟಿ ಸಿಲುಕಿ ರಸ್ತೆಗೆ ಉರುಳಿದೆ.
ರಸ್ತೆಯಲ್ಲಿ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ ವಿದ್ಯಾರ್ಥಿನಿಯನ್ನು ಕಂಡ ರಿಕ್ಷಾ ಚಾಲಕರೊಬ್ಬರು ತಕ್ಷಣ ಆಕೆಯನ್ನು ನಗರದ ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಬಲಗೈ ಮೂಳೆ ಮುರಿತಕ್ಕೊಳಗಾಗಿರುವುದು ಎಕ್ಸ್-ರೇ ಮೂಲಕ ಗೊತ್ತಾಗಿದೆ. ಅಲ್ಲದೇ ಕೈ ಹಾಗೂ ಮೈ ಪೂರ್ತಿ ಅಲ್ಲಲ್ಲಿ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಲಗೈ ಮೂಳೆ ಜೋಡಿಸಲು ಶಸ್ತ್ರ ಚಿಕಿತ್ಸೆ ನಡೆಸಿ ರಾಡ್ ಅಳವಡಿಸಲಾಗಿದೆ. ಮುಂದಿನ ಆರು ತಿಂಗಳುಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಅಂದು ಪ್ರಾಜೆಕ್ಟ್ ಕೆಲಸಗಳಿದ್ದುದರಿಂದ ಕಾಲೇಜಿಗೆ ಸ್ಕೂಟರ್ ತಂದಿದ್ದೆ. ಮನೆಗೆ ವಾಪಸ್ ಮರಳುವ ಸಂದರ್ಭ ನೇತ್ರಾವತಿ ಸೇತುವೆಯಲ್ಲಿನ ಹೊಂಡ ಅರಿವಿಗೆ ಬಾರದೆ ಬಿದ್ದು ಕೈ ಮುರಿತಕ್ಕೊಳಗಾಗಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದೇನೆ. ಎಂಎಸ್ಸಿ ಅಂತಿಮ ವರ್ಷವಾಗಿರುವುದರಿಂದ ಆಗಸ್ಟ್ ತಿಂಗಳಿನಲ್ಲಿ ಆಂತರಿಕ ಪರೀಕ್ಷೆಗಳಿವೆ. ಅದನ್ನು ಎದುರಿಸಲು ಸಾಧ್ಯವಿಲ್ಲ. ಜೊತೆಗೆ ಆ.12 ರಂದು ಯುಜಿಸಿ ಪರೀಕ್ಷೆ ಇರುವುದರಿಂದ ಭವಿಷ್ಯವೇ ಅತಂತ್ರವಾಗಿದೆ. ಶಸ್ತ್ರಚಿಕಿತ್ಸೆಗೆ ಈವರೆಗೆ ರೂ.65,000 ಖರ್ಚನ್ನು ಪೋಷಕರು ಭರಿಸಿದ್ದಾರೆ. ಆಸ್ಪತ್ರೆ ಬಿಲ್ ಇನ್ನು ಬರಬೇಕಿದೆ. ಹೆದ್ದಾರಿ ಅವ್ಯವಸ್ಥೆಯೇ ಅಪಘಾತಕ್ಕೆ ಕಾರಣ. ಯಾರ ಮೇಲೆ ಪ್ರಕರಣ ದಾಖಲಿಸುವುದು ಎಂಬ ಗೊಂದಲದಲ್ಲಿ ಇರುವುದರಿಂದ ಅದನ್ನು ಕೈಬಿಟ್ಟಿದ್ದೇವೆ ಎನ್ನುತ್ತಾರೆ ಗಾಯಾಳು ವಿದ್ಯಾರ್ಥಿನಿ ನಿಶ್ಮಿತಾ.
Discover more from Coastal Times Kannada
Subscribe to get the latest posts sent to your email.
Discussion about this post