ಮಂಗಳೂರು: ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2008ರಲ್ಲಿ ದಾಖಲಾಗಿದ್ದ ಭಯೋತ್ಪಾದನಾ ಪ್ರಕರಣದ ಆರೋಪಿ ಶಂಕಿತ ಉಗ್ರ ಯಾಸೀನ್ ಭಟ್ಕಳ ಯಾನೆ ಶಾರೂಕ್ ಯಾನೆ ಡಾಕ್ಟರ್ ಅರಾಜೂನನ್ನು ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರಿಪಡಿಸಲಾಯಿತು. ಈತನ ವಿರುದ್ದದ ಪ್ರಕರಣ ಹಲವಾರು ವರ್ಷಗಳಿಂದ ವಿಚಾರಣೆಯಾಗದೆ ನ್ಯಾಯಾಲಯದಲ್ಲಿ ಬಾಕಿಯಿತ್ತು.
ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿ, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಮತ್ತು ಚೆಂಬುಗುಡ್ಡೆ ಎಂಬಲ್ಲಿ ದೇಶದ ವಿವಿಧ ಕಡೆಗಳಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಪೂರ್ವ ತಯಾರಿ ನಡೆಸಲಾಗುತ್ತಿದೆ ಎಂಬ ಆರೋಪದ ಮೇರೆಗೆ 2008ರ ಅ. 4 ರಂದು ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಆರೋಪಿಗಳು ಸ್ಫೋಟಕ ವಸ್ತುಗಳ ಸಹಿತ ಸಿಕ್ಕಿಬಿದ್ದಿದ್ದರು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಡಿಸಿಐಬಿ ವಿಭಾಗದ ಆಗಿನ ಅಧಿಕಾರಿ ಮತ್ತು ಸಿಬ್ಬಂದಿ ಆರೋಪಿಗಳನ್ನು ಪತ್ತೆ ಹಚ್ಚಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸ್ಫೋಟಕ ವಸ್ತುಗಳ ಸಹಿತ ಸಿಕ್ಕಿಬಿದ್ದಿದ್ದ ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ 7 ಜನರನ್ನು ಬಂಧಿಸಲಾಗಿದ್ದು, 6 ಜನ ಆರೋಪಿಗಳು ತಲೆಮರೆಸಿಕೊಂಡಿದ್ದರು ಎಂದು ತಿಳಿಸಿದರು.
ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದ್ದು, ವಿಚಾರಣೆ ನಡೆದು ಆರೋಪಿಗಳಾದ ಸೈಯದ್ ಮೊಹಮ್ಮದ್ ನೌಶಾದ್, ಅಹಮ್ಮದ್ ಬಾವ ಅಬೂಬಕ್ಕರ್ (33), ಫಕೀರ್ ಅಹಮ್ಮದ್ ಯಾನೆ ಫಕೀರ್ ಎಂಬವರಿಗೆ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆರೋಪಿಗಳಾದ ಮೊಹಮ್ಮದ್ ಆಲಿ, ಜಾವೇದ್ ಆಲಿ, ಮೊಹಮ್ಮದ್ ರಫೀಕ್ ಮತ್ತು ಶಬ್ಬೀರ್ ಭಟ್ಕಳ್ ಎಂಬವರನ್ನು ಖುಲಾಸೆಗೊಳಿಸಿ 2017 ರ ಏಪ್ರಿಲ್ 12ರಂದು ನ್ಯಾಯಾಲಯ ಅಂತಿಮ ತೀರ್ಪು ನೀಡಿತ್ತು ಎಂದು ವಿವರಿಸಿದರು.
ಪ್ರಕರಣದ ವಿಚಾರಣಾ ಸಮಯದಲ್ಲಿ ಯಾಸೀನ್ ಭಟ್ಕಳ ತಲೆಮರೆಸಿಕೊಂಡಿದ್ದ ಕಾರಣ ವಿಚಾರಣೆ ಬಾಕಿ ಇತ್ತು. ಈ ಪ್ರಕರಣದ ಆರೋಪಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಯಾಸೀನ್ ಭಟ್ಕಳ ಯಾನೆ ಶಾರೂಕ್ ಯಾನೆ ಡಾಕ್ಟರ್ ಅರಾಜೂ ಯಾನೆ ಯೂಸಫ್ ಯಾನೆ ಇಮ್ರಾನ್ ಯಾನೆ ಯಾಸೀರ್ ಅಹಮ್ಮದ್ ಹೈದರಾಬಾದ್ನಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ದೆಹಲಿಯ ತಿಹಾರ್ ಕೇಂದ್ರ ಕಾರಾಗೃಹದಲ್ಲಿ ಶಿಕ್ಷಾ ಖೈದಿಯಾಗಿ ಬಂಧನದಲ್ಲಿದ್ದಾನೆ ಎಂದು ಹೇಳಿದರು.
ಈತನನ್ನು ಹಲವಾರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರುಪಡಿಸದೇ ಇರುವುದರಿಂದ ಈತನ ಮೇಲಿನ ಪ್ರಕರಣ ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ಬಾಕಿಯಿತ್ತು. ಈ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿ ಸೂಕ್ತ ಪ್ರಕ್ರಿಯೆಯನ್ನು ಕೈಗೊಂಡು ದೆಹಲಿ ತಿಹಾರ್ ಕೇಂದ್ರ ಕಾರಾಗೃಹದಲ್ಲಿದ್ದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಆರೋಪಿ ಯಾಸೀನ್ ಭಟ್ಕಳ್ನನ್ನು ವಿಡಿಯೋ ಕಾನ್ಪರೆನ್ಸ್ ಮುಖಾಂತರ ಮಂಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಚಾರಣೆಗೆ ಹಾಜರುಪಡಿಸಿದ್ದಾರೆ. ಮುಂದಿನ ವಿಚಾರಣೆ ಆಗಸ್ಟ್ 20ಕ್ಕೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post