ಶಿವಮೊಗ್ಗ, ಆ.24 : ಇಬ್ಬರು ಯುವಕರ ಜೊತೆಗೆ ಸೇರಿ ತನ್ನ ಗಂಡನನ್ನೇ ಕಬ್ಬಿಣದ ರಾಡ್ ನಲ್ಲಿ ಹೊಡೆದು ಸಾಯಿಸಿ ಮೃತದೇಹವನ್ನು ಹೊಳೆಗೆ ಎಸೆದ ಪ್ರಕರಣದಲ್ಲಿ ಮಹಿಳೆ ಸೇರಿ ಇಬ್ಬರಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ಇನ್ನೊಬ್ಬ ವ್ಯಕ್ತಿಗೆ ಏಳು ವರ್ಷಗಳ ಶಿಕ್ಷೆ ವಿಧಿಸಲಾಗಿದೆ.
2016ರ ಜುಲೈ 7ರಂದು ಕೊಲೆ ಕೃತ್ಯ ನಡೆದಿತ್ತು. ಲಕ್ಷ್ಮಿ ಎಂಬ ಮಹಿಳೆಯನ್ನು ಇಮ್ತಿಯಾಜ್ ಅಹ್ಮದ್ ಎಂಬಾತ ಘಟನೆಯ ಐದು ವರ್ಷಗಳ ಹಿಂದೆ ಮದುವೆಯಾಗಿದ್ದಳು. ಆದರೆ ಪತಿ- ಪತ್ನಿ ನಡುವೆ ವೈಮನಸ್ಸು ಉಂಟಾಗಿದ್ದು, ಪತ್ನಿ ಲಕ್ಷ್ಮೀ ಗಂಡನನ್ನು ಕಬ್ಬಿಣದ ರಾಡ್ ನಲ್ಲಿ ಹೊಡೆಸಿ ಸಾಯಿಸಿದ್ದಳು ಎನ್ನಲಾಗಿದೆ. ಆನಂತರ, ಸಾಕ್ಷ್ಯ ಮುಚ್ಚಿ ಹಾಕುವುದಕ್ಕಾಗಿ ಅದೇ ಪರಿಸರದ ಶಿವಮೂರ್ತಿ ಹಾಗೂ ಕೃಷ್ಣಮೂರ್ತಿ ಎಂಬವರ ಜೊತೆಗೂಡಿ ಮೃತದೇಹವನ್ನು ಹೊಳೆಗೆ ಎಸೆದಿದ್ದಳು. ಇಮ್ತಿಯಾಜ್ ಸೋದರ ಎಜಾಜ್ ಈ ಬಗ್ಗೆ ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣದ ಬೆನ್ನತ್ತಿದ ಸಿಪಿಐಗಳಾದ ಪ್ರಭು ಬಿ. ಸೂರಿನ್ ಮತ್ತು ಚಂದ್ರಶೇಖರ್ ಟಿಕೆ ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಶಿವಮೊಗ್ಗ 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಇಂದಿರಾ ಮೈಲಾಸ್ವಾಮಿ ಚೆಟ್ಟಿಯಾರ್ ಅವರು 2025ರ ಆಗಸ್ಟ್ 23ರಂದು ತೀರ್ಪು ನೀಡಿದ್ದಾರೆ. ಆರೋಪಿ ಭದ್ರಾವತಿ ಜನ್ನಾಪುರ ನಿವಾಸಿಗಳಾದ 37 ವರ್ಷದ ಲಕ್ಷ್ಮೀ ಮತ್ತು ಕೃಷ್ಣಮೂರ್ತಿ (38) ಅವರಿಗೆ ಮರಣ ದಂಡನೆ ಶಿಕ್ಷೆ ನೀಡಿದ್ದಾರೆ. ಶಿವರಾಜು (40) ಗೆ 7 ವರ್ಷಗಳ ಶಿಕ್ಷೆಯನ್ನು ನೀಡಿ ತೀರ್ಪು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ: ಮೂಲತಃ ಭದ್ರಾವತಿಯ ಜನ್ನಾಪುರದ ನಿವಾಸಿಯಾಗಿರುವ ಲಕ್ಷ್ಮಿ 2011ರಲ್ಲಿ ಕಲಬುರಗಿಯಲ್ಲಿ ಸರಕಾರಿ ಶಾಲಾ ಶಿಕ್ಷಕಿಯಾಗಿ ನೇಮಕಗೊಂಡಿದ್ದಳು. ಅಲ್ಲಿಯೇ ಶಿಕ್ಷಕರಾಗಿದ್ದ ಇಮ್ತಿಯಾಝ್ ಅಹ್ಮದ್ ರನ್ನು ಪ್ರೀತಿಸಿ ಮದುವೆಯಾಗಿದ್ದಳು. ನಂತರ ಶಿಕ್ಷಕ ದಂಪತಿ ವಾಪಸ್ ಭದ್ರಾವತಿ ತಾಲೂಕಿಗೆ ವರ್ಗಾವಣೆ ಪಡೆದಿದ್ದರು. ಈ ದಂಪತಿಗೆ ಓರ್ವ ಪುತ್ರ ಕೂಡಾ ಇದ್ದಾನೆ. ಜನ್ನಾಪುರದಲ್ಲಿ ವಾಸವಿದ್ದ ಲಕ್ಷ್ಮೀಗೆ ಬಾಲ್ಯದ ಸ್ನೇಹಿತ, ವೃತ್ತಿಯಲ್ಲಿ ಚಾಲಕನಾಗಿದ್ದ ಕೃಷ್ಣಮೂರ್ತಿ ಜೊತೆ ಆತ್ಮೀಯತೆ ಬೆಳೆದಿತ್ತು. ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತೆನ್ನಲಾಗಿದೆ. ಇದನ್ನು ಇಮ್ತಿಯಾಝ್ ವಿರೋಧಿಸಿದ್ದರು. ಈ ಕಾರಣಕ್ಕೆ ಇಮ್ತಿಯಾಝ್ ಅವರನ್ನು ಲಕ್ಷ್ಮೀ, ಆಕೆಯ ಪ್ರಿಯಕರ ಕೃಷ್ಣಮೂರ್ತಿ ಹಾಗೂ ಆತನ ಸ್ನೇಹಿತ ಶಿವರಾಜ ಸೇರಿ 2016ರ ಜುಲೈ 7ರಂದು ಜನ್ನಾಪುರದ ಮನೆಯಲ್ಲಿ ತಲೆಗೆ ರಾಡ್ ಮತ್ತು ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಕೊಲೆ ಮಾಡಿ ಮೃತದೇಹವನ್ನು ಭದ್ರಾ ನದಿಗೆ ಎಸೆದಿರುವುದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿತ್ತು.
Discover more from Coastal Times Kannada
Subscribe to get the latest posts sent to your email.
Discussion about this post