ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ವಿಶ್ವವಿಖ್ಯಾತ ‘ಮಂಗಳೂರು ದಸರಾ’ ಮಹೋತ್ಸವ ಸೆ.26ರಿಂದ ಅ.6ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ನಡೆಯಲಿದ್ದು, ಸಿದ್ಧತೆ ಭರದಿಂದ ಸಾಗಿದೆ ಎಂದು ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ ಹೇಳಿದರು. ಕುದ್ರೋಳಿ ಕ್ಷೇತ್ರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವರಾತ್ರಿ ಉತ್ಸವದ ಪ್ರತಿದಿನ ಪುಷ್ಪಾಲಂಕಾರ, ಮಹಾಪೂಜೆ, ಭಜನಾ ಕಾರ್ಯಕ್ರಮ, ಅನ್ನದಾನ, ಸಾಂಸ್ಕೃತಿಕ ಕಾರ್ಯಕ್ರಮ, ದೇವರ ಬಲಿ ಉತ್ಸವಗಳು ನಡೆಯಲಿವೆ. ಸೆ.26ರಂದು ಬೆಳಿಗ್ಗೆ 9.30ಕ್ಕೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ, ನವಕಲಶಾಭಿಷೇಕ, ಕಲಶ ಪ್ರತಿಷ್ಠೆ, ನವದುರ್ಗೆಯರ ಮತ್ತು ಶಾರದಾ ಪ್ರತಿಷ್ಠೆ ನಡೆಯಲಿದೆ ಎಂದರು.
ಸೆ.26ರಂದು ಪೂಜಾರಿ ಚಾಲನೆ : ಸೆ.26ರಂದು ಬೆಳಿಗ್ಗೆ 11.15ಕ್ಕೆ ಕೇಂದ್ರದ ಮಾಜಿ ಸಚಿವ, ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಮಂಗಳೂರು ದಸರಾಕ್ಕೆ ಚಾಲನೆ ನೀಡುವರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ, ಮಹಾಲಿಂಗ ನಾಯ್ಕ್ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗುವರು. ಪೂಜಾರಿಯವರ ಆಶಯದಂತೆ ವರ್ಣರಂಜಿತ ಅದ್ಧೂರಿ ದಸರಾ ದರ್ಬಾರ್ ಮಂಟಪ ಸಿದ್ಧಗೊಂಡಿದ್ದು, ಅದ್ಧೂರಿ ದಸರಾ ಆಚರಣೆಗೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ.
ಸೆ.27ರಂದು ದುರ್ಗಾಹೋಮ, ಸೆ.28ರಂದು ಆರ್ಯ ದುರ್ಗಾಹೋಮ, ಸೆ.29ರಂದು ಅಂಬಿಕಾ ದುರ್ಗಾ ಹೋಮ, ಸೆ.30ರಂದು ಭಗವತಿ ದುರ್ಗಾ ಹೋಮ, ಸಾಮೂಹಿಕ ಚಂಡಿಕಾ ಹೋಮ, ಅ.1ರಂದು ಕುಮಾರಿ ದುರ್ಗಾ ಹೋಮ, ಅ.2ರಂದು ಮಹಿಷಮರ್ದಿನಿ ದುರ್ಗಾ ಹೋಮ, ಅ.3ರಂದು ಚಂಡಿಕಾ ಹೋಮ, ಹಗಲೋತ್ಸವ, ದುರ್ಗಾಷ್ಟಮಿ, ಅ.4ರಂದು ಸರಸ್ವತಿ ದುರ್ಗಾಹೋಮ, ಶತಸೀಯಾಳಾಭಿಷೇಕ, ಶಿವಪೂಜೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅ.5ರಂದು ಭವ್ಯ ಶೋಭಾಯಾತ್ರೆ: ಅ.5ರಂದು ಬೆಳಿಗ್ಗೆ ವಾಗೀಶ್ವರಿ ದುರ್ಗಾಹೋಮ, ಮಧ್ಯಾಹ್ನ ಶಿವಪೂಜೆ, ಸಂಜೆ 4 ಗಂಟೆಗೆ ಶಾರದಾ ಮಾತೆಯ ವೈಭವದ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಅ.6ರಂದು ಪ್ರಾತಃಕಾಲ 4ರಿಂದ ಪೂಜೆ ಬಲಿ, ಮಂಟಪ ಬಲಿ, ಪ್ರಾತಃಕಾಲ ಮಂಟಪ ಪೂಜೆ ಬಳಿಕ ಶಾರದಾ ವಿಸರ್ಜನೆ, ಅವಭೃತ ಸ್ನಾನ ನಡೆಯಲಿದೆ ಎಂದರು. ‘ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಸೂಚನೆಯಂತೆ ಮಂಗಳೂರು ದಸರಾದ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 20 ಕಲಾತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಅಲ್ಲದೆ, ಸ್ಥಳೀಯ ಕಲಾತಂಡಗಳು, ಹುಲಿವೇಷ ಹಾಗೂ ಇತರ ಟ್ಯಾಬ್ಲೊಗಳು, ವೇಷಭೂಷಣಗಳು, ಚೆಂಡೆ ತಂಡಗಳು ಮೆರವಣಿಗೆಗೆ ಮೆರುಗು ನೀಡಲಿದೆ. ಮೆರವಣಿಗೆ ಸಾಗುವ ರಾಜಬೀದಿಗೆ ಸುಮಾರು ₹ 92 ಲಕ್ಷ ವೆಚ್ಚದಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಮಂಗಳೂರು ಮಹಾನಗರ ಪಾಲಿಕೆಯಿಂದ ವಿದ್ಯುತ್ ದೀಪದ ಅಲಂಕಾರ ಮಾಡಲಾಗುತ್ತದೆ. ಅಲ್ಲದೆ, ರಾಜಬೀದಿಯ ಅಕ್ಕಪಕ್ಕದ ಕಟ್ಟಡಗಳಿಗೆ ಅದರ ಮಾಲೀಕರು ವಿದ್ಯುತ್ ದೀಪಗಳ ಅಲಂಕಾರ ಮಾಡುವ ಮೂಲಕ ಸಂಭ್ರಮವನ್ನು ಹೆಚ್ಚಿಸಬೇಕು’ ಎಂದು ಅಭಿವೃದ್ಧಿ ಸಮಿತಿ ಸದಸ್ಯ ಹರಿಕೃಷ್ಣ ಬಂಟ್ವಾಳ್ ಮನವಿ ಮಾಡಿದರು.
ಕ್ಷೇತ್ರಾಡಳಿತ ಮಂಡಳಿ ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಟ್ರಸ್ಟಿಗಳಾದ ರವಿಶಂಕರ್ ಮಿಜಾರ್, ಕೆ. ಮಹೇಶ್ಚಂದ್ರ, ಎಂ.ಶೇಖರ್ ಪೂಜಾರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷ ಅನಸೂಯ ಬಿ.ಟಿ. ಸಾಲಿಯಾನ್, ಉಪಾಧ್ಯಕ್ಷ ಬಿ.ಜಿ. ಸುವರ್ಣ, ಸದಸ್ಯರಾದ ಚಿತ್ತರಂಜನ್ ಗರೋಡಿ, ರಮಾನಾಥ ಕಾರಂದೂರು, ಜತಿನ್ ಅತ್ತಾವರ, ಗೌರವಿ ಪಿ.ಕೆ., ಕಿಶೋರ್ ದಂಡೆಕೇರಿ, ಲೀಲಾಕ್ಷ ಕರ್ಕೇರ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post