ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ವಿಚಾರಣೆಗೆ ಹಾಜರಾಗಲು ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ನಾಲ್ಕು ಮಂದಿಗೆ ಎಸ್.ಐ.ಟಿ ನೋಟಿಸ್ ಜಾರಿ ಮಾಡಿದೆ.
ಅ.27 ರಂದು ಸೋಮವಾರ 10 :30 ಕ್ಕೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಹಾಜರಾಗಲು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ. ಹಾಗೂ ವಿಠಲ ಗೌಡರಿಗೆ ನೋಟಿಸ್ ನೀಡಲಾಗಿದೆ. ನೋಟಿಸ್ ನೀಡಿರುವ ಎಸ್ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮಾ, ಹಾಜರಾಗದಿದ್ದರೆ ಬಂಧನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಬಿಎನ್ ಎಸ್ಎಸ್ 35(3) ಅಡಿಯಲ್ಲಿ ನೀಡಲಾದ ನೋಟಿಸ್‌ನಲ್ಲಿ, ಪ್ರಕರಣದ ಸಂದರ್ಭಗಳು ಮತ್ತು ಸಂಬಂಧಿತ ಸಂಗತಿಗಳನ್ನು ಖಚಿತಪಡಿಸಲು ಈ ನಾಲ್ವರ ಹಾಜರಾತಿ ಅಗತ್ಯವಿದ್ದುದಾಗಿ ವಿವರಿಸಲಾಗಿದೆ. ತನಿಖಾಧಿಕಾರಿಯು ನೋಟಿಸ್‌ನಲ್ಲಿ ಪ್ರಕರಣದ ಮಹತ್ವಪೂರ್ಣ ಅಂಶಗಳನ್ನು ಉಲ್ಲೇಖಿಸಿ, ಮಾಹಿತಿಯನ್ನು ದೃಢಪಡಿಸಲು ಅವರ ಸಹಕಾರವನ್ನು ಕೇಳಿದ್ದಾರೆ.
ನೋಟಿಸ್‌ನಲ್ಲಿ, ಆರೋಪಿಗಳಿಗೆ ಇವು ಕಡ್ಡಾಯವಾಗಿ ಪಾಲನೆ ಮಾಡಲು ಸೂಚಿಸಲಾಗಿದೆ: ಯಾವುದೇ ಅಪರಾಧ ನಡೆಸಬಾರದು, ಸಾಕ್ಷ್ಯಗಳಿಗೆ ಪ್ರಭಾವ ಬೀರಬಾರದು, ನ್ಯಾಯಾಲಯದ ಮುಂದೆ ಅಥವಾ ತನಿಖಾಧಿಕಾರಿಗಳ ಮುಂದೆ ಸಂಗತಿಗಳನ್ನು ಸತ್ಯಹೀನವಾಗಿ ಹೇಳಬಾರದು, ನ್ಯಾಯಾಲಯ/ತದನಂತರ ತನಿಖೆಯಲ್ಲಿ ಹಾಜರಾಗುವುದು, ಸಹಕಾರ ನೀಡುವುದು, ಎಲ್ಲಾ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಹಾಜರುಪಡಿಸುವುದು, ಆರೋಪಿಗಳ ಗುರುತಿಸುವಿಕೆ ಮತ್ತು ಬಂಧನದಲ್ಲಿ ಸಹಕಾರ ನೀಡುವುದು, ಮತ್ತು ಸಾಕ್ಷ್ಯಗಳನ್ನು ನಾಶಮಾಡದಂತೆ ಮಾಡುವುದು. ನೋಟಿಸ್ ಪಾಲನೆ ಮಾಡದಿದ್ದರೆ, ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಕಲಂ 35(6) ಅಡಿಯಲ್ಲಿ ದಸ್ತಗಿರಿ ಕ್ರಮ ಕೈಗೊಳ್ಳಲಾಗುವುದು ಎಂದು ಸಹ ಉಲ್ಲೇಖಿಸಲಾಗಿದೆ.

Discover more from Coastal Times Kannada
Subscribe to get the latest posts sent to your email.








Discussion about this post