ಪುತ್ತೂರು,ಡಿ. 25: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಮುಂದಿನ 3 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ವಿಜಯ ಕರ್ನಾಟಕ ಪತ್ರಿಕೆಯ ಜಿಲ್ಲಾ ವರದಿಗಾರ ಸುಧಾಕರ ಸುವರ್ಣ ಅವಿರೋಧ ಆಯ್ಕೆಯಾಗಿದ್ದಾರೆ.
ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಸಿ.ಶೇ. ಕಜೆಮಾರ್ ಅವಿರೋಧ ಆಯ್ಕೆಯಾಗಿದ್ದಾರೆ. ಬುಧವಾರ ಪುತ್ತೂರು ಪತ್ರಿಕಾ ಭವನದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು.
ಜಿಲ್ಲಾ ಸಂಘದ ಕೋಶಾಧಿಕಾರಿ ವಿಜಯ ಕೋಟ್ಯಾನ್ ಪಡು ಚುನಾವಣಾಧಿಕಾರಿಯಾಗಿದ್ದರು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು. ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ಹಿಂದೆಗೆತ ಪ್ರಕ್ರಿಯೆ ನಡೆಸಿ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳನ್ನು ಘೋಷಿಸಲು ಡಿ.28 ಬುಧವಾರ ನಿಗದಿ ಮಾಡಲಾಗಿತ್ತು. ಅಗತ್ಯವಿದ್ದರೆ ಡಿ.28ರಂದು ಚುನಾವಣೆ ನಡೆಸಲು ನಿಗದಿ ಮಾಡಲಾಗಿತ್ತು. ಎಲ್ಲ ಹುದ್ದೆಗಳಿಗೂ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಕಾರಣ ಚುನಾವಣಾಧಿಕಾರಿಗಳು ಫಲಿತಾಂಶ ಘೋಷಿಸಿ ಪ್ರಮಾಣಪತ್ರ ವಿತರಿಸಿದರು.
ಉಪಾಧ್ಯಕ್ಷರಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಕರುಣಾಕರ ರೈ ಸಿ.ಎಚ್., ಉದಯವಾಣಿ ಪತ್ರಿಕೆಯ ಉಪ್ಪಿನಂಗಡಿ ವರದಿಗಾರ ಎಂ.ಎಸ್. ಭಟ್ ಆಯ್ಕೆಯಾದರು. ಆಡಳಿತ ಮಂಡಳಿಯ ಎಲ್ಲ 15 ಸದಸ್ಯರಿಗೆ ಚುನಾವಣಾಧಿಕಾರಿಗಳು ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು. ಸಂಘದ ಇಡೀ ತಂಡವನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಪುತ್ತೂರಿನ ಪತ್ರಕರ್ತರು ಇಡೀ ಸಮಾಜಕ್ಕೆ ಉತ್ತಮ ನಿದರ್ಶನ ತೋರಿಸಿದ್ದಾರೆ ಎಂದವರು ನುಡಿದರು.
ನಿರ್ಗಮನ ಅಧ್ಯಕ್ಷ ಸಿದ್ದಿಕ್ ನೀರಾಜೆ ಮತ್ತು ನಿರ್ಗಮನ ಪ್ರಧಾನ ಕಾರ್ಯದರ್ಶಿ ಶಶಿಧರ ರೈ ಕುತ್ಯಾಳ ಅಭಿನಂದಿಸಿ ಮಾತನಾಡಿದರು. ಹೊಸ ತಂಡದ ಪರವಾಗಿ ನೂತನ ಅಧ್ಯಕ್ಷ ಸುಧಾಕರ ಸುವರ್ಣ ಮತ್ತು ನೂತನ ಪ್ರಧಾನ ಕಾರ್ಯದರ್ಶಿ ಸಿ.ಶೇ. ಕಜೆಮಾರ್ ಅವರು ಎಲ್ಲ ಮತದಾರ ಸದಸ್ಯರಿಗೆ ಮತ್ತು ಆಯ್ಕೆಯಾದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ಬಂಟ್ವಾಳ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪ್ರಶಾಂತ್ ಪುಂಜಾಲಕಟ್ಟೆ, ಪ್ರ.ಕಾರ್ಯದರ್ಶಿಯಾಗಿ ಮಹಮ್ಮದ್ ಆಲಿ ವಿಟ್ಲ ಅವಿರೋಧ ಆಯ್ಕೆ

ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪ್ರಶಾಂತ್ ಪುಂಜಾಲಕಟ್ಟೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಆಲಿ ವಿಟ್ಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸೂಚನೆಯಂತೆ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾರ್ಗದರ್ಶನದಲ್ಲಿ ಮಂಗಳವಾರ ಚುನಾವಣಾ ಪ್ರಕ್ರಿಯೆಗಳು ನಡೆದಿದ್ದು, ಚುನಾವಣಾಧಿಕಾರಿ ಸುರೇಶ ಡಿ ಪಳ್ಳಿ ಯವರು ಅವಿರೋಧವಾಗಿ ಆಯ್ಕೆಯಾದ ನೂತನ ಆಡಳಿತ ಮಂಡಳಿಯನ್ನು ಘೋಷಿಸಿದರು. ಸಂಘದ ಅಧ್ಯಕ್ಷ ಸಹಿತ ಐದು ಪದಾಧಿಕಾರಿಗಳ ಸ್ಥಾನ, ಐದು ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಗಳಿಗೆ ಮಂಗಳವಾರ ಬೆಳಿಗ್ಗೆ 10 ರಿಂದ 11:30 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. 10 ಸ್ಥಾನಗಳಿಗೆ 10 ನಾಮಪತ್ರಗಳು ಮಾತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ, ನಾಮಪತ್ರ ಪರಿಶೀಲನೆಗ ಹಾಗೂ ನಾಮ ಪತ್ರ ಹಿಂತೆಗೆತದ ನಿಗದಿತ ಅವಧಿಯ ಬಳಿಕ, ನಾಮಪತ್ರ ಸಲ್ಲಿಸಿದ್ದ ಎಲ್ಲಾ ಹತ್ತು ಮಂದಿಯನ್ನು ಚುನಾವಣಾ ಧಿಕಾರಿಗಳು ಅವಿರೋಧ ಆಯ್ಕೆ ಎಂದು ಘೋಷಿಸಿದರು.
ಕೋಶಾಧಿಕಾರಿಯಾಗಿ ಚಂದ್ರ ಶೇಖರ ಕಲ್ಮಲೆ, ಉಪಾಧ್ಯಕ್ಷರಾಗಿ ರಮೇಶ್ ಕೆ. ಪುಣಚ(ವಿಷ್ಣುಗುಪ್ತ ಪುಣಚ) ಹಾಗೂ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ತಲಪಾಡಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಗೆ ವೆಂಕಟೆಶ್ ಬಂಟ್ವಾಳ, ರತ್ನದೇವ್ ಪುಂಜಾಲಕಟ್ಟೆ, ಉದಯಶಂಕರ ನೀರ್ಪಾಜೆ, ವಾಮನ ಪೊಳಲಿ ಹಾಗೂ ಮೌನೇಶ ವಿಶ್ವಕರ್ಮ ಆಯ್ಕೆಯಾದರು. ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಜಿಲ್ಲಾ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಬಿ.ಎನ್. ಅಭಿನಂದಿಸಿದರು. ಈ ಸಂದರ್ಭ ಚುನಾವಣಾಧಿಕಾರಿ ಸುರೇಶ್ ಡಿ ಪಳ್ಳಿ, ಸಹಾಯಕ ಚುನಾವಣಾಧಿಕಾರಿ ಜಯಶ್ರೀ ನವೀನ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಸಂದೀಪ್ ಸಾಲ್ಯಾನ್ , ಪತ್ರಕರ್ತರಾದ ಗಣೇಶ್ ಪ್ರಸಾದ್ ಪಾಂಡೇಲು, ಕಿಶೋರ್ ಪೆರಾಜೆ, ಕಿರಣ್ ಸರಪಾಡಿ, ಹರೀಶ್ ಮಾಂಬಾಡಿ ಯಾದವ ಅಗ್ರಬೈಲು ಮೊದಲಾದವರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post