ಉಳ್ಳಾಲ: ಕೋಟೆಕಾರು ಸೇವಾ ಸಹಕಾರಿ ಸಂಘದ ಕೆ.ಸಿ.ರೋಡ್ ಶಾಖೆ ದರೋಡೆಯ ಪ್ರಮುಖ ಕಿಂಗ್ ಪಿನ್ ಸಹಿತ ಸ್ಥಳೀಯ ಸೂತ್ರದಾರನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ದರೋಡೆಗೆ ಸಂಬಂಧಿಸಿದಂತೆ ಒಟ್ಟು ಆರು ಆರೋಪಿಗಳನ್ನು ಕಳವಾದ 18.250 ಕೆ.ಜಿ. ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ದರೋಡೆಗೆ ಸಂಬಂಧಿಸಿದಂತೆ ಇನ್ನೂ ಮೂವರು ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದ್ದು, ದರೋಡೆಗೆ ಸಂಬಂಧಿಸಿದ ಪ್ರಮುಖ ಆರೋಪಿಗಳ ಬಂಧನದಿಂದ ತಾರ್ಕಿಕ ಅಂತ್ಯ ದೊರೆತಂತಾಗಿದೆ.
ದರೋಡೆಯ ಮುಖ್ಯ ಕಿಂಗ್ ಪಿನ್ ಕಳೆದ ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಬಂಟ್ವಾಳ ಕನ್ಯಾನ ಮೂಲದ ದರೋಡೆಯ ಪ್ರಮುಖ ರೂವಾರಿ ಭಾಸ್ಕರ ಬೆಳ್ಚಪ್ಪಾಡ ಯಾನೆ ಶಶಿ ತೇವರ್ (69) ಮತ್ತು ಕೋಟೆಕಾರು ಬ್ಯಾಂಕ್‌ನ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದ ಸ್ಥಳೀಯ ಸೂತ್ರದಾರ ತಲಪಾಡಿ ಕೆ.ಸಿ. ರೋಡ್ ಶಾಜ್ ಕಾಟೇಜ್ ನಿವಾಸಿ ಮಹಮ್ಮದ್ ನಝೀರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಭಾಸ್ಕರ ಬೆಳ್ಚಾಪ್ಪಾಡನನ್ನು ಬೆಂಗಳೂರಿನ ರೈಲ್ವೇ ನಿಲ್ದಾಣ ಬಳಿ ಪೊಲೀಸರು ವಶಕ್ಕೆ ತೆಗೆದುಕೊಂಡರೆ ಆತನ ಮಾಹಿತಿಯಂತೆ ಸ್ಥಳೀಯವಾಗಿ ಬ್ಯಾಂಕ್‌ನ ಮಾಹಿತಿ ನೀಡಿ ದರೋಡೆಗೆ ಸ್ಥಳೀಯವಾಗಿ ಸೂತ್ರದಾರನಾಗಿದ್ದ ಮಹಮ್ಮದ್ ನಝೀರ್‌ನನ್ನು ಕೆ.ಸಿ. ರೋಡ್‌ನ ಮನೆಯಿಂದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಮುರುಗನ್ ಡಿ ದೇವರ್ ಮತ್ತು ಇತರ ಮೂವರನ್ನು ಕೃತ್ಯ ನಡೆದ ಒಂದೇ ವಾರದಲ್ಲಿ ತಮಿಳುನಾಡಿನಲ್ಲಿ ಬಂಧಿಸಿದ್ದರೂ, ಈ ಕೃತ್ಯ ಸ್ಥಳೀಯರ ಕೈವಾಡ ಇಲ್ಲದೇ ನಡೆದಿರಲು ಸಾಧ್ಯವೇ ಇಲ್ಲ ಎನ್ನುವ ಮಾತು ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ಪೊಲೀಸ್ ಅಧಿಕಾರಿಗಳು ಕೂಡ ಪ್ರಕರಣದಲ್ಲಿ ಸ್ಥಳೀಯ ವ್ಯಕ್ತಿಯ ಕೈವಾಡ ಇದೆ, ಅವರನ್ನು ಬಂಧನ ಮಾಡುತ್ತೇವೆ ಎಂದಿದ್ದರು. ಇದೇ ಕಾರಣಕ್ಕೆ ಎನ್ನುವಂತೆ, ಮುರುಗನ್ ಮತ್ತು ಮಣಿ ಕಣ್ಣನ್ ಅವರ ಮೇಲೆ ಗುಂಡು ಹಾರಿಸಿ ನೆರವು ನೀಡಿದ್ದ ಸ್ಥಳೀಯ ವ್ಯಕ್ತಿ ಯಾರು ಎನ್ನುವ ಬಗ್ಗೆ ಬಾಯಿ ಬಿಡುವಂತೆ ಮಾಡಿದ್ದರು ಎನ್ನಲಾಗಿದೆ.
ಆನಂತರ, ಶಶಿ ತೇವರ್ ಎನ್ನುವ ವ್ಯಕ್ತಿಯೇ ಧಾರಾವಿ ಮೂಲದ ನಟೋರಿಯಸ್ ಗ್ಯಾಂಗ್ ಸದಸ್ಯರಿಗೆ ಕೋಟೆಕಾರು ಬ್ಯಾಂಕ್ ಬಗ್ಗೆ ಮಾಹಿತಿ ನೀಡಿದ್ದ ಎನ್ನಲಾಗಿತ್ತು. ಆದರೆ ಈ ಶಶಿ ತೇವರ್ ಎನ್ನುವ ಹೆಸರು ಸ್ಥಳೀಯ ಆಗಿರಲಿಕ್ಕಿಲ್ಲ. ಆದರೆ ಅಪರಾಧ ಹಿನ್ನೆಲೆಯುಳ್ಳ ಸ್ಥಳೀಯರೇ ಯಾರಾದರೂ ಇಂತಹ ಹೆಸರಿನಲ್ಲಿ ಮುಂಬೈನಲ್ಲಿ ಇದ್ದಿರಬಹುದು ಎನ್ನುವ ಶಂಕೆ ಮೂಡಿತ್ತು. ಇದೇ ಆಯಾಮದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು. ಇದೀಗ ಶಶಿ ತೇವರ್ ಎನ್ನುವ ಹೆಸರಲ್ಲಿ ಗುರುತಿಸಿಕೊಂಡಿದ್ದ ಭಾಸ್ಕರ ಬೆಳ್ಚಪ್ಪಾಡ ಎಂಬಾತನನ್ನು ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ. ಭಾಸ್ಕರ್ ನನ್ನು ವಿಚಾರಣೆ ನಡೆಸಿದಾಗ, ಕಳೆದ ಏಳು ವರ್ಷಗಳಿಂದ ಕೆಸಿ ರೋಡ್ ನಿವಾಸಿ ಮಹಮ್ಮದ್ ನಜೀರ್ ಜೊತೆಗೆ ಸಂಪರ್ಕದಲ್ಲಿರುವುದು ಮತ್ತು ಕೋಟೆಕಾರು ಬ್ಯಾಂಕನ್ನು ದರೋಡೆ ಮಾಡಲು ಇತರ ಆರೋಪಿಗಳೊಂದಿಗೆ ಸೇರಿ ಸಂಚು ನಡೆಸಿರುವುದನ್ನೂ ತಿಳಿಸಿದ್ದ.
ಇದರಂತೆ, ಬ್ಯಾಂಕ್ ದರೋಡೆಗೆ ಮಾಹಿತಿ ಕೊಟ್ಟು, ಡಕಾಯಿತಿ ನಡೆಸಬೇಕಾದ ದಿನ ಮತ್ತು ಸಮಯದ ಬಗ್ಗೆಯೂ ತಿಳಿಸಿದ್ದಲ್ಲದೆ, ಸೊಸೈಟಿಯಲ್ಲಿರುವ ಸಿಬಂದಿಗಳ ಬಗ್ಗೆ ಮತ್ತು ಕೃತ್ಯದ ನಂತರ ತಪ್ಪಿಸಿಕೊಂಡು ಹೋಗುವ ಮಾರ್ಗ ಮುಂತಾದ ಮಾಹಿತಿಯನ್ನು ನೀಡಿದ್ದ ಮಹಮ್ಮದ್ ನಜೀರ್ ನನ್ನು ಬಂಧಿಸಲಾಗಿದೆ. ತನಿಖೆಯ ಸಂದರ್ಭದಲ್ಲಿ ಮಹಮ್ಮದ್ ನಜೀರ್ ಸ್ಥಳೀಯವಾಗಿ ಆರೋಪಿಗಳಿಗೆ ಸಹಕಾರ ಕೊಟ್ಟಿರುವುದು ಪತ್ತೆಯಾಗಿದೆ.
“ಬಾಸ್ಕರ್ ಬೆಳ್ಚಪಾಡ ಸುಮಾರು 25 ವರ್ಷಗಳಿಂದ ಹುಟ್ಟೂರಾದ ಬಂಟ್ವಾಳದ ಕನ್ಯಾನವನ್ನು ಬಿಟ್ಟು ಮುಂಬೈನಲ್ಲಿ ವಾಸವಾಗಿದ್ದ. ಈತನ ವಿರುದ್ದ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಡಕಾಯಿತಿ, ಸುಲಿಗೆ, ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. 2011ರಲ್ಲಿ ದೆಹಲಿಯಲ್ಲಿ ದರೋಡೆ ಪ್ರಯತ್ನ, 2021ರಲ್ಲಿ ಮುಂಬೈ ಕ್ರೈಂ ಬ್ರಾಂಚ್ ಸಿಐಡಿ ಠಾಣಾ ವ್ಯಾಪ್ತಿಯಲ್ಲಿ ಭಾರತ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಪ್ರಕರಣ, 2022ರಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ, 2022ರಲ್ಲಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಪ್ರಯತ್ನ ಪ್ರಕರಣ ದಾಖಲಾಗಿದೆ” ಅವರು ಎಂದು ಹೇಳಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post