ಬೆಂಗಳೂರು: ಭಾರತದ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಗೆ ಸಂಬಂಧಿಸಿದಂತೆ ನಿನ್ನೆ (ಮಂಗಳವಾರ) ಮಹತ್ವದ ಬೆಳವಣಿಗೆ ನಡೆದಿದೆ. ಕೋಟಿಗಟ್ಟಲೆ ಅಭಿಮಾನಿಗಳನ್ನು ಹೊಂದಿರುವ ಟೂರ್ನಿಯ ಪ್ರಮುಖ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಮತ್ತು ರಾಜಸ್ತಾನ್ ರಾಯಲ್ಸ್(ಆರ್‌ಆರ್) ಸಾವಿರಾರು ಕೋಟಿ ರೂಪಾಯಿ ಮೊತ್ತಕ್ಕೆ ಮಾರಾಟವಾಗಿದ್ದು, ಹೊಸ ಮಾಲೀಕರ ತೆಕ್ಕೆ ಸೇರಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಪುರುಷ ಮತ್ತು ಮಹಿಳಾ ತಂಡಗಳನ್ನು ಆದಿತ್ಯ ಬಿರ್ಲಾ ಗ್ರೂಪ್ (ಎಬಿಜಿ) ಪ್ರಸ್ತುತ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನಿಂದ ಸುಮಾರು 16,705 ಕೋಟಿ ರೂಪಾಯಿಗೆ ಸ್ವಾಧೀನ ಮಾಡಿಕೊಂಡಿದೆ. ಇನ್ನೊಂದೆಡೆ, ರಾಜಸ್ಥಾನ್ ರಾಯಲ್ಸ್ ಅನ್ನು ಅಮೆರಿಕ ಮೂಲದ ಕಲ್ ಸೋಮಾನಿ ನೇತೃತ್ವದ ಒಕ್ಕೂಟ ಸುಮಾರು 15,290 ಕೋಟಿ ರೂ.ಗೆ ಖರೀದಿ ಮಾಡಿದೆ.
ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್(ಯುಎಸ್‌ಎಲ್), ತನ್ನ ನಿರ್ದೇಶಕರ ಮಂಡಳಿಯ ಸಭೆಯ ನಿರ್ಧಾರದಂತೆ ತನ್ನ ಸಂಪೂರ್ಣ ಒಡೆತನದ ಅಂಗಸಂಸ್ಥೆ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (ಆರ್‌ಸಿಎಸ್‌ಪಿಎಲ್)ನಲ್ಲಿ ಹೊಂದಿರುವ ಶೇ.100 ಈಕ್ವಿಟಿ ಪಾಲನ್ನು ಮಾರಾಟ ಮಾಡುವ ಮಹತ್ವದ ಒಪ್ಪಂದ ಮಾಡಿಕೊಂಡಿದೆ ಎಂದು ಯುಎಸ್‌ಎಲ್ ಹೇಳಿಕೆಯಲ್ಲಿ ತಿಳಿಸಿದೆ.
ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ಪ್ರತಿಕ್ರಿಯಿಸಿ, “ಕಳೆದ ಎರಡು ದಶಕಗಳಲ್ಲಿ ಐಪಿಎಲ್ ಜಾಗತಿಕ ಕ್ರೀಡಾ ಶಕ್ತಿ ಕೇಂದ್ರವಾಗಿ ಬದಲಾಗಿದೆ. ಇದು ಭಾರತೀಯ ಕ್ರಿಕೆಟ್‌ನ ಮುಖವನ್ನೇ ಬದಲಿಸಿದೆ. ಭಾರತಕ್ಕೆ ಅಗಾಧ ಮೌಲ್ಯವನ್ನು ತಂದುಕೊಂಡಿದೆ” ಎಂದು ಹೇಳಿದ್ದಾರೆ.
ಆದಿತ್ಯ ಬಿರ್ಲಾ ಗ್ರೂಪ್ (ABG) ಸೇರಿದಂತೆ ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ (ಟೈಮ್ಸ್), ಬೋಲ್ಟ್ ವೆಂಚರ್ಸ್ (ಬೋಲ್ಟ್), ಮತ್ತು ಬ್ಲಾಕ್‌ಸ್ಟೋನ್‌ನ ಶಾಶ್ವತ ಖಾಸಗಿ ಷೇರು ತಂತ್ರ, BXPE (ಬ್ಲಾಕ್‌ಸ್ಟೋನ್) ಇದೀಗ ಆರ್‌ಸಿಬಿ ಹೊಸ ಮಾಲೀಕರಾಗಿದ್ದಾರೆ.
ರಾಜಸ್ತಾನ್ ರಾಯಲ್ಸ್ ಖರೀದಿಸಿದ ಸೋಮಾನಿ ನೇತೃತ್ವದ ಒಕ್ಕೂಟದಲ್ಲಿ ವಾಲ್ಮಾರ್ಟ್ ಕುಟುಂಬದ ರಾಬ್ ವಾಲ್ಟನ್ ಮತ್ತು ಹ್ಯಾಂಪ್ ಕುಟುಂಬ (ಫೋರ್ಡ್ ಮೋಟಾರ್ ಕಂಪನಿ)ಗಳನ್ನು ಒಳಗೊಂಡಿದೆ.
Discover more from Coastal Times Kannada
Subscribe to get the latest posts sent to your email.








Discussion about this post