ಬೆಂಗಳೂರು, ಮಾ 25 : ಮಂಗಳೂರಿನ ಮೂಡುಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ಕರ್ಮಕಾಂಡ ಸುದ್ದಿ ಬೆನ್ನಲ್ಲೇ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಾಪಣ್ಣ ವಿರುದ್ಧ ಲೈಂಗಿಕ ಕಿರುಕುಳ, ಅಶ್ಲೀಲ ಸಂದೇಶ ಹಾಗೂ ಕೊಲೆ ಬೆದರಿಕೆ ಆರೋಪ ಕೇಳಿಬಂದಿದ್ದು, ಪೊಲೀಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಈ ಸಂಬಂಧ ಲೇಡಿ ರೌಡಿಶೀಟರ್ ಯಶಸ್ವಿನಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ದೂರು ಸಲ್ಲಿಸಿದ್ದು, ಆರೋಪಿ ಇನ್ಸ್ ಪೆಕ್ಟರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ದೂರಿನಲ್ಲಿ ಇನ್ಸ್‌ಪೆಕ್ಟರ್ ಪಾಪಣ್ಣ ಕಳೆದ ಕೆಲ ತಿಂಗಳಿನಿಂದ ನಿರಂತರವಾಗಿ ಫೋನ್ ಕರೆಗಳು ಹಾಗೂ ವಾಟ್ಸಾಪ್ ಸಂದೇಶಗಳ ಮೂಲಕ ಕಿರುಕುಳ ನೀಡುತ್ತಿದ್ದಾರೆಂದು ದೂರಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಿರುವಂತೆ, ಪಾಪಣ್ಣ ಅವರು ‘ಚಿನ್ನ, ಮುದ್ದು, ಬಂಗಾರಿ’ ಎಂಬ ಉಲ್ಲೇಖಗಳೊಂದಿಗೆ ಅಶ್ಲೀಲ ಮಾತನಾಡಿರುವುದಷ್ಟೇ ಅಲ್ಲದೆ, ‘ಕಿಸ್ ಮಾಡ್ಬೇಕು, ಹಗ್ ಮಾಡ್ಕೊಳ್ಬೇಕು’ ಎಂಬ ರೀತಿಯ ಸಂದೇಶಗಳನ್ನು ಕಳುಹಿಸಿದ್ದಾರೆಂದು ಆರೋಪ ಕೇಳಿಬಂದಿದೆ. ಕಿರುಕುಳಕ್ಕೆ ಪ್ರತಿಕ್ರಿಯಿಸದಿದ್ದಾಗ, ಹಲವಾರು ಬಾರಿ ಬೇರೆ ಬೇರೆ ಸಂಖ್ಯೆಯಿಂದ ಸಂಪರ್ಕ ಸಾಧಿಸಿ ಒತ್ತಡ ಹಾಕಿರುವುದಾಗಿ ಯಶಸ್ವಿನಿ ಆರೋಪಿಸಿದ್ದಾರೆ.
ವಾಟ್ಸಪ್ ಚಾಟ್, ಆಡಿಯೋ ಸಾಕ್ಷ್ಯ ಸಲ್ಲಿಕೆ: ಆರೋಪಿಯು ವಾಟ್ಸಪ್ ಮೂಲಕ ಕಳುಹಿಸಿದ್ದ ಅಶ್ಲೀಲ ಸಂದೇಶಗಳು ಹಾಗೂ ಸಂಭಾಷಣೆಗಳ ಸ್ಕ್ರೀನ್‌ಶಾಟ್‌ಗಳನ್ನು ಕೂಡ ಪೊಲೀಸ್ ಆಯುಕ್ತರಿಗೆ ಆಸಂತ್ರಸ್ತೆ ಸಲ್ಲಿಸಿದ್ದಾರೆ. ಜೊತೆಗೆ, ಇನ್ಸ್‌ಪೆಕ್ಟರ್ ಮತ್ತು ದೂರುದಾರೆ ನಡುವೆ ನಡೆದಿದ್ದೆಂದು ಹೇಳಲಾಗುತ್ತಿರುವ ಆಡಿಯೋ ದಾಖಲೆಗಳನ್ನೂ ಕಮಿಷನರ್ ಕಚೇರಿಗೆ ನೀಡಿದ್ದಾರೆ.
ಕೊಲೆ ಬೆದರಿಕೆ ಆರೋಪ : ಈ ಪ್ರಕರಣ ಬಹಿರಂಗಪಡಿಸಿದರೆ ದೂರುದಾರೆಯನ್ನೂ ಅವರ ಮಕ್ಕಳನ್ನೂ ಸುಪಾರಿ ಕೊಟ್ಟು ಕೊಲೆ ಮಾಡಿಸುವುದಾಗಿ ಇನ್ಸ್‌ಪೆಕ್ಟರ್ ಪಾಪಣ್ಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಹಲವಾರು ಬಾರಿ ಕರೆ ಮಾಡಿ ಮನೆಗೆ ಬರುವುದಾಗಿ ಹೇಳಿ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.
ಎಲೆಕ್ಟ್ರಾನಿಕ್ ಸಾಕ್ಷ್ಯಾಧಾರಗಳೊಂದಿಗೆ ಸಲ್ಲಿಸಿರುವ ಈ ದೂರಿನ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸುವ ಸಾಧ್ಯತೆ ಇದೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೂರುದಾರೆ ಮನವಿ ಮಾಡಿದ್ದಾರೆ. ಇದರ ಜೊತೆಗೆ, ತನ್ನ ವಿರುದ್ಧ ಯಾರೂ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಪಾಪಣ್ಣ ದರ್ಪ ತೋರಿದ್ದಾರೆಂಬ ಆರೋಪವೂ ಕೇಳಿಬಂದಿದೆ. ತನ್ನ ಪತ್ನಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿ ಎಂಬ ಹೇಳಿಕೆಯನ್ನು ನೀಡಿ ಪ್ರಭಾವ ಬೀರುವ ಪ್ರಯತ್ನ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post