ಮಂಗಳೂರು: ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಎನ್ಐಎ ಒಪ್ಪಿಸುವಂತೆ ಆಗ್ರಹಿಸಿ ಬಜಪೆಯಲ್ಲಿ ಬೃಹತ್ ಜನಾಗ್ರಹ ಸಭೆ ನಡೆಯುತ್ತಿದೆ. ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಂಗಳೂರು ವತಿಯಿಂದ ಆಯೋಜನೆ ಮಾಡಲಾಗಿದೆ. ಬಜಪೆ ಜಂಕ್ಷನ್ನ ಶಾರದ ಮಂಟಪ ಬಳಿ ಸಭೆ ಸೇರಲಾಗಿದ್ದು, ಸುರಿಯುತ್ತಿರುವ ಭಾರಿ ಮಳೆಯ ನಡುವೆಯೂ ಸಭೆ ನಡೆಸಲಾಗುತ್ತಿದೆ.
ಬಜ್ಪೆಯಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ವಿಶ್ವ ಹಿಂದು ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಜನಾಗ್ರಹ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸಿಗರು ಸುಹಾಸ್ ಶೆಟ್ಟಿಯನ್ನು ರೌಡಿ ಎಂದು ಕರೆದು ಆತನ ಮನೆಗೆ ಹೋಗಲ್ಲ ಎಂದರು. ಆದರೆ ನಾವು ಹೇಳುತ್ತಿದ್ದೇವೆ, ಇಲ್ಲಿ ಸೇರಿದ ನಾನೂ ಸಹಿತ 40 ಪ್ರತಿಶತ ಎಲ್ಲ ಕಾರ್ಯಕರ್ತರೂ ರೌಡಿಗಳೇ ಆಗಿದ್ದಾರೆ. ಆದರೆ ನಾವೆಲ್ಲ ಹಿಂದುತ್ವಕ್ಕಾಗಿ ರೌಡಿ ಪಟ್ಟ ಅಂಟಿಸಿಕೊಂಡವರು. ಯಾರದ್ದೋ ಹಟ್ಟಿಗೆ ನುಗ್ಗಿ ದನ ಕದ್ದಿದ್ದಕ್ಕೋ ಅಥವಾ ಇನ್ಯಾರನ್ನೋ ಕೊಲೆ, ದರೋಡೆ ಮಾಡಿದ್ದಕ್ಕಾಗಿ ಅಲ್ಲ.
ಹಿಂದು ಕಾರ್ಯಕರ್ತನನ್ನು ರೌಡಿಯೆಂದು ಜರೆದ ರಾಜ್ಯದ ಗೃಹ ಸಚಿವರು ಗೋಲ್ಡ್ ಸ್ಮಗ್ಲಿಂಗ್ ಮಾಡಿದವರಿಗೆ 40 ಲಕ್ಷ ರೂಪಾಯಿ ನೀಡಿದ್ದಕ್ಕಾಗಿ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಾಂಗ್ರೆಸಿನಲ್ಲಿ ಅದೆಷ್ಟು ರೌಡಿಗಳು ಅಧಿಕಾರ ಸ್ಥಾನದಲ್ಲಿದ್ದಾರೆ. ಆದರೆ ಇಲ್ಲಿ ಗೋವಿಗಾಗಿ, ಹಿಂದುತ್ವಕ್ಕಾಗಿ ಹೋರಾಟ ನಡೆಸಿದವರು ನಮ್ಮ ಪೊಲೀಸ್ ವ್ಯವಸ್ಥೆಯಲ್ಲಿ ರೌಡಿಗಳಾಗಿದ್ದಾರೆ. ಭಯೋತ್ಪಾದಕರ ಕೈಯಲ್ಲಿ ಕೊಲೆಯಾದ ಸಂದರ್ಭದಲ್ಲಿ ರೌಡಿಗಳೆಂದು ಜರೆದು ಕಾಂಗ್ರೆಸಿಗರು ಅವರ ಮನೆಗೂ ಭೇಟಿ ಕೊಡಲಿಲ್ಲ. ಇಂತಹ ಸ್ಥಿತಿ ಇನ್ಯಾವತ್ತೂ ಬರಬಾರದು ಎನ್ನುವ ಕಾರಣಕ್ಕೆ ನಾವು ಎನ್ಐಎ ತನಿಖೆಗೆ ಕೋರುತ್ತಿದ್ದೇವೆ. ಕೊಲೆ ಕೃತ್ಯದಲ್ಲಿ ಸ್ಥಳೀಯ ಪೊಲೀಸರದ್ದೇ ಕೈವಾಡ ಇರುವ ಶಂಕೆ ಇರುವುದರಿಂದ ಎನ್ಐಎ ತನಿಖೆಯಾದರೆ ಹಿಂದಿರುವ ಎಲ್ಲ ಶಕ್ತಿಯೂ ಹೊರಗೆ ಬರುತ್ತದೆ ಎನ್ನುವ ವಿಶ್ವಾಸ ಇದೆ ಎಂದರು.
ವಾಗ್ಮಿ ಹಿಂಜಾವೇ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಅವರಿಂದ ಪ್ರಧಾನ ಭಾಷಣ ನಡೆಯಲಿದ್ದು, ಸುಹಾಸ್ ಹೆತ್ತವರಾದ ಮೋಹನ್ ಶೆಟ್ಟಿ, ಬಜಪೆ ಸುಲೋಚನ ಎಂ ಶೆಟ್ಟಿ, ಶಾಸಕ ಉಮಾನಾಥ ಕೋಟ್ಯಾನ್, ವಿ.ಪ.ಸದಸ್ಯ ಪ್ರತಾಪ ಸಿಂಹ ನಾಯಕ್, ಶರಣ್ ಪಂಪ್ ವೆಲ್, ಶಿವಾನಂದ್ ಮೆಂಡನ್, ಭುಜಂಗ ಕುಲಾಲ್, ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಚ್. ಕೆ. ಪುರುಷೋತ್ತಮ್ ಮೊದಲಾದವರು ಭಾಗಿಯಾಗಿದ್ದಾರೆ.
ಜನಾಗ್ರಹಸಭೆ ಹಿನ್ನೆಲೆಯಲ್ಲಿ ಬಜಪೆ ಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದೆ. ಬಜಪೆ ಪರಿಸರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪೇಟೆ ಪ್ರವೇಶಿಸುವ ವಾಹನಗಳ ತಪಾಸಣೆ ನಡೆಸಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post