ಪುತ್ತೂರು, ಜುಲೈ 26: ನಾಲ್ಕು ದಿನಗಳ ಹಿಂದೆ ಬೆಳ್ಳಾರೆಯಲ್ಲಿ ನಡೆದಿದ್ದ ಮಸೂದ್ ಎಂಬ ಯುವಕನ ಕೊಲೆಗೆ ಪ್ರತೀಕಾರ ಎನ್ನುವಂತೆ ಬಿಜೆಪಿ ಯುವಮೋರ್ಚಾ ಕಾರ್ಯಕರ್ತನನ್ನು ಕಡಿದು ಹತ್ಯೆ ಮಾಡಲಾಗಿದೆ. ದ.ಕ. ಜಿಲ್ಲಾ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ, ಸ್ಥಳೀಯವಾಗಿ ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ಪ್ರವೀಣ್ ಕುಮಾರ್ ನೆಟ್ಟಾರು (31) ಎಂಬ ಯುವಕನನ್ನು ಭೀಕರವಾಗಿ ಕಡಿದು ಹತ್ಯೆ ಮಾಡಲಾಗಿದೆ. ಪ್ರವೀಣ್, ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಬೆಳ್ಳಾರೆ ಪೆರುವಾಜೆ ಕ್ರಾಸ್ ಬಳಿ ಪ್ರವೀಣ್ ಅವರು ಕೋಳಿ ಅಂಗಡಿ ಹೊಂದಿದ್ದು ರಾತ್ರಿ ಅಂಗಡಿ ಮುಚ್ಚುತ್ತಿರುವ ವೇಳೆ ಒಂದು ಬೈಕಿನಲ್ಲಿ ಮೂವರು ಅವರ ಮೇಲೆ ಮಾರಾಕಾಸ್ತ್ರಗಳಿಂದ ಏಕಾಏಕಿ ದಾಳಿ ಮಾಡಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ. ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದ ಪ್ರವೀಣ್ ಅವರನ್ನು ಆಸ್ಪತ್ರೆಗೆ ಒಯ್ಯುವ ದಾರಿಯಲ್ಲೇ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ನಾಲ್ಕು ದಿನಗಳ ಹಿಂದೆ ಕಾಸರಗೋಡು ಮೂಲದ ಮಸೂದ್ ಎನ್ನುವ ಯುವಕನ ಮೇಲೆ ಎಂಟು ಜನರು ಗುಂಪು ಹಲ್ಲೆ ನಡೆಸಿತ್ತು. ತಲೆಯ ಭಾಗಕ್ಕೆ ಬಾಟಲಿಯಿಂದ ಹಲ್ಲೆ ನಡೆಸಿದ್ದರಿಂದ ಎರಡು ದಿನಗಳ ನಂತರ ಮಂಗಳೂರಿನ ಆಸ್ಪತ್ರೆಯಲ್ಲಿ ಮಸೂದ್ ಸಾವನ್ನಪ್ಪಿದ್ದ. ಈ ಘಟನೆ ಬಗ್ಗೆ ಮುಸ್ಲಿಂ ಸಂಘಟನೆಗಳು, ನಾಯಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಮಸೂದ್ ನನ್ನು ಹೊಡೆದು ಹಾಕಿದ್ದ ಯುವಕರು ಹಿಂದು ಸಂಘಟನೆಯ ಕಾರ್ಯಕರ್ತರು ಎನ್ನುವ ಆರೋಪವೂ ಕೇಳಿಬಂದಿತ್ತು. ಅದೇ ಘಟನೆಗೆ ಈಗ ಕಾಸರಗೋಡಿನಿಂದ ಬಂದಿದ್ದ ಯುವಕರು ಪ್ರತೀಕಾರ ತೀರಿಸಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಪುತ್ತೂರಿನ ಆಸ್ಪತ್ರೆಯಲ್ಲಿ ಪ್ರವೀಣ್ ಅಸುನೀಗಿದ್ದಾರೆ. ವಿಷಯ ತಿಳಿಯುತ್ತಲೇ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಪುತ್ತೂರು ನಗರ ಮತ್ತು ಬೆಳ್ಳಾರೆ ಪೇಟೆಯಲ್ಲಿ ಪೊಲೀಸರು ಅಂಗಡಿಗಳನ್ನು ಮುಚ್ಚಿಸಿದ್ದಾರೆ. ರಾತ್ರಿಯೇ ಉದ್ವಿಗ್ನ ಸ್ಥಿತಿ ನೆಲೆಸಿದೆ.
Discover more from Coastal Times Kannada
Subscribe to get the latest posts sent to your email.
Discussion about this post