ಉಡುಪಿ: ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ತನ್ನ ಪತಿಗೆ ವಿಷವುಣಿಸಿ ಬಳಿಕ ಉಸಿರುಗಟ್ಟಿಸಿ ಕೊಲೆಗೈದ ಆರೋಪ ಪ್ರಕರಣ ಕಾರ್ಕಳ ಸಮೀಪ ಅಜೆಕಾರಿನ ಮರ್ಣೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಬಾಲಕೃಷ್ಣ (44) ಹತ್ಯೆಯಾದ ಪತಿಯಾಗಿದ್ದು, ಪ್ರಕರಣ ಸಂಬಂಧ ಆರೋಪಿ ಪತ್ನಿ ಪ್ರತಿಮಾ ಹಾಗೂ ಪ್ರಿಯಕರ ಹಿರ್ಗಾನದ ದಿಲೀಪ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ 25 ದಿನಗಳಿಂದ ಬಾಲಕೃಷ್ಣ ಪೂಜಾರಿ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಆತನಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಬಳಿಕ ಬೆಂಗಳೂರಿನ ನಿಮಾನ್ಸ್, ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಅ.20ರಂದು ಬಾಲಕೃಷ್ಣ ಮನೆಯಲ್ಲಿ ಸಾವನ್ನಪ್ಪಿದ್ದರು. ಈ ಸಾವಿನ ಬಗ್ಗೆ ಪ್ರತಿಮಾಳ ಸಹೋದರ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಅಜೆಕಾರು ಠಾಣೆ ಪೊಲೀಸರು ಪ್ರತಿಮಾ ಮತ್ತು ಆಕೆಯ ಪ್ರಿಯಕರನ ದಿಲೀಪ್ ನನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿಗಳು ಕೊಲೆ ರಹಸ್ಯ ಬಾಯಿಬಿಟ್ಟಿದ್ದಾರೆ.
ಪ್ರತಿಮಾಗೆ ರೀಲ್ಸ್ ಗೀಳು ಹಿಡಿದಿತ್ತು. ಬಲವಂತವಾಗಿ ಪತಿ ಬಾಲಕೃಷ್ಣ ಪೂಜಾರಿ ಜೊತೆ ಪ್ರತಿಮಾ ಹಲವು ರೀಲ್ಸ್ ಗಳನ್ನು ಮಾಡಿದ್ದಾಳೆ. ಈ ರೀಲ್ಸ್ ಗಳನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಳು. ಇದೇ ಇನ್ ಸ್ಟಾಗ್ರಾಂನಲ್ಲಿ ದಿಲೀಪ್ ಹೆಗ್ಡೆ ಮತ್ತು ಪ್ರತಿಮಾ ನಡುವೆ ಪರಿಚವಾಗಿತ್ತು.
ಮದುವೆಯಾಗಿ ಸುಖ ಸಂಸಾರ ಮಾಡುತ್ತಿದ್ದ ದಂಪತಿಗೆ ಅದೊಂದು ಅನೈತಿಕ ಸಂಬಂಧದ ಶುರುವಾಗಿದೆ. ಮನೆಯಲ್ಲಿ ಮನ್ಮಥನಂತಹ ಗಂಡನಿದ್ದರೂ ಮನದರಸಿ ಮಾತ್ರ ಪರ ಪರುಷನಿಗೆ ತನ್ನ ಮನಸ್ಸು ಹಾಗೂ ಮೈಯನ್ನು ಒಪ್ಪಿಸಲು ಮುಂದಾಗಿದ್ದಳು. ಆದರೆ, ತಮ್ಮ ಅನೈತಿಕ ಸಂಬಂಧಕ್ಕೆ ಸ್ವತಃ ತನ್ನ ಪತಿಯೇ ಅಡ್ಡಿಯಾಗುತ್ತಾನೆ ಎಂದು ಆತನನ್ನು ಕೊಲೆ ಮಾಡುವುದಕ್ಕೆ ನಿರ್ಧಾರ ಮಾಡಿದ್ದಾಳೆ. ಹೇಗಾದರೂ ಮಾಡಿ ಗಂಡನನ್ನು ಕೊನೆಗಾಣಿಸಿದರೆ, ಪ್ರಿಯಕರನೊಂದಿಗೆ ಜೀವನಪೂರ್ತಿ ನೆಮ್ಮದಿಯಾಗಿ ಇರಬಹುದು ಎಂದು ಆಲೋಚನೆ ಮಾಡಿದ್ದಾಳೆ.
ಹೆಂಡತಿಯೊಂದಿಗೆ ಸಂಸಾರ ಮಾಡಿಕೊಂಡಿದ್ದ ಬಾಲಕೃಷ್ಣ ಪೂಜಾರಿಗೆ ತನ್ನ ಹೆಂಡತಿ ಪ್ರತಿಮಾ ಮುಹೂರ್ತ ಇಟ್ಟಿದ್ದ ಬಗ್ಗೆ ಒಂಚೂರೂ ಅನುಮಾನ ಬಂದಿಲ್ಲ. ಹೆಂಡತಿ ಐಷಾರಾಮಿಯಾಗಿ ಜೀವನ ಮಾಡುವುದಕ್ಕೆ ಹಾಗೂ ಮಾರ್ಡನ್ ಹೆಣ್ಣುಮಕ್ಕಳಂತೆ ಫ್ಯಾಷನ್ ಮಾಡಲು ಕೂಡ ಅವಕಾಶ ನೀಡಿದ್ದಾನೆ. ಹೆಂಡತಿಯ ಪ್ರತಿಯೊಂದು ಆಸಕ್ತಿ, ಅಭಿರುಚಿಗೆ ಪ್ರೋತ್ಸಾಹ ನೀಡುತ್ತಿದ್ದ ಗಂಡನ ಜೀವವನ್ನೇ ಹೆಂಡತಿ ಕೊನೆಗಾಣಿಸಿದ್ದಾಳೆ.
ಇದ್ದಕ್ಕಿದ್ದಂತೆ ಮಾರ್ಡನ್ ಬ್ಯೂಟಿ ಪ್ರತಿಮಾಳ ಗಂಡ ಬಾಲಕೃಷ್ಣನಿಗೆ ಅನಾರೋಗ್ಯ ಉಂಟಾಗುತ್ತದೆ. ಕಳೆದ 25 ದಿನಗಳಿಂದ ವಾಂತಿ, ಬೇಧಿ ಶುರುವಾಗಿದ್ದು, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಗಂಡನಿಗೆ ಕಾಮಾಲೆ ರೋಗವಿದೆ ಎಂದು ಸಂಬಂಧಿಕರಿಗೆ ತಿಳಿಸಿ, ಆತನನ್ನು ಕಾರ್ಕಳದ ಆಸ್ಪತ್ರೆಗೆ ದಾಖಲಿಸುತ್ತಾರೆ. ನಂತರ, ಮಣಿಪಾಲ ಕೆಎಂಸಿ, ಬೆಂಗಳೂರಿನ ನಿಮ್ಹಾನ್ಸ್, ವಿಕ್ಟೋರಿಯಾ ಆಸ್ಪತ್ರೆ, ಮಂಗಳೂರಿನ ವೆಲ್ಲಾಕ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸುತ್ತಾರೆ. ಆದರೆ ಯಾವುದೇ ಆಸ್ಪತ್ರೆಯಲ್ಲಿಯೂ ಬಾಲಕೃಷ್ಣ ಮಾತ್ರ ಚೇತರಿಕೆ ಕಾಣಿಸಿಕೊಳ್ಳಲೇ ಇಲ್ಲ.
ದಿಢೀರ್ ಕಾಣಿಸಿಕೊಂಡ ಅನಾರೋಗ್ಯದಿಂದ ಮೃತಪಟ್ಟ ಬಗ್ಗೆ ಪ್ರತಿಮಾಳ ಅಣ್ಣ ಪದೇ ಪದೇ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಪ್ರತಿಮಾ ಮತ್ತು ದಿಲೀಪ್ ತಮ್ಮ ಗೆಳೆತನಕ್ಕೆ ಅಡ್ಡ ಬರುತ್ತಿದ್ದ ಬಾಲಕೃಷ್ಣ ಅವರನ್ನು ಕೊಲೆ ಮಾಡಲು ಯೋಚಿಸಿದ್ದರು. ಯೋಜನೆಯಂತೆ ದಿಲೀಪ್ ಯಾವುದೋ ವಿಷ ಪದಾರ್ಥ ತಂದು, ಅದನ್ನು ಊಟದಲ್ಲಿ ಬೆರೆಸಿಕೊಟ್ಟರೆ ನಿಧಾನವಾಗಿ ಸಾಯುತ್ತಾರೆ ಎಂದು ಹೇಳಿದ್ದಾನೆ. ಅದರಂತೆ ಪ್ರತಿಮಾ ಊಟದಲ್ಲಿ ವಿಷ ಹಾಕಿ ಬಾಲಕೃಷ್ಣ ಅವರಿಗೆ ಕೊಟ್ಟಿದ್ದಾಳೆ. ನಂತರ ಅವರಿಗೆ ಅನಾರೋಗ್ಯ ಉಂಟಾಗಿದೆ ಎಂದು ದೂರಿನಲ್ಲಿ ರಾಮಕೃಷ್ಣ ತಿಳಿಸಿದ್ದರು.

Discover more from Coastal Times Kannada
Subscribe to get the latest posts sent to your email.
Discussion about this post