ಬೆಂಗಳೂರು, ಅ.25 : ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಕಳವು ಮಾಡಲಾದ ಚಿನ್ನವನ್ನು ಬಳ್ಳಾರಿಯ ಉದ್ಯಮಿ ರೊದ್ದಂ ಗೋವರ್ಧನ್ ಅವರ ಜುವೆಲ್ಲರಿಗೆ ಮಾರಾಟ ಮಾಡಿರುವುದನ್ನು ಕೇರಳ ಪೊಲೀಸರು ಪತ್ತೆ ಮಾಡಿದ್ದಾರೆ. ಈ ಸಂಬಂಧ ಕೇರಳದ ಎಸ್ಐಟಿ ಪೊಲೀಸರು ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ದಾಳಿ ನಡೆಸಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಬೆಂಗಳೂರಿನ ಶ್ರೀರಾಂಪುರ ವ್ಯಾಪ್ತಿಯಲ್ಲಿರುವ ಪ್ರಕರಣದ ಪ್ರಮುಖ ಆರೋಪಿ ಅರ್ಚಕ ಪೋಟಿ ಉನ್ನಿಕೃಷ್ಣನ್ ನಿವಾಸ ಹಾಗೂ ಬಳ್ಳಾರಿಯ ರೊದ್ದಂ ಜ್ಯುವೆಲ್ಲರ್ಸ್ ಮೇಲೆ ಕೇರಳ ಪೊಲೀಸರು ದಾಳಿ ನಡೆಸಿದ್ದಾರೆ. ಶಬರಿಮಲೆ ದೇವಾಲಯದ ದ್ವಾರಪಾಲಕ ಮೂರ್ತಿಗಳಿಂದ 475 ಗ್ರಾಂ ಚಿನ್ನದ ಪ್ಲೇಟ್ ಕದ್ದ ಆರೋಪದಡಿ ಪೋಟಿ ಉನ್ನಿಕೃಷ್ಣನ್ ಅವರನ್ನು ಕೇರಳ ಪೊಲೀಸರು ಬಂಧಿಸಿದ್ದರು. ಕದ್ದ ಚಿನ್ನವನ್ನು ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್ ಅವರಿಗೆ ಮಾರಾಟ ಮಾಡಿದ ಆರೋಪದಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಮಹತ್ವದ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉದ್ಯಮಿ ಗೋವರ್ಧನ್ ಅವರ ಒಡೆತನದ ರೊದ್ದಂ ಆಭರಣ ಅಂಗಡಿಯಿಂದ ವಿಶೇಷ ತನಿಖಾ ತಂಡ ಹಲವಾರು ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆದಿದೆ. ಇದೇ ವೇಳೆ, ಪೋಟಿ ಉನ್ನಿಕೃಷ್ಣನ್ ಅವರಿಂದ 476 ಗ್ರಾಂ ಚಿನ್ನ ಖರೀದಿಸಿದ್ದಾಗಿ ಗೋವರ್ಧನ್ ಒಪ್ಪಿಕೊಂಡಿದ್ದಾರೆ.
ಶಬರಿಮಲೆಯಲ್ಲಿ ಕಳ್ಳತನ ಆದ ಚಿನ್ನ ಎನ್ನುವುದು ಗೊತ್ತಿರದ ಕಾರಣ ನಾನು ಚಿನ್ನ ಖರೀದಿ ಮಾಡಿದ್ದೆ. ಕದ್ದಿದ್ದ ಚಿನ್ನ ಎಂದು ಗೊತ್ತಿದ್ದರೆ ಖರೀದಿ ಮಾಡುತ್ತಿರಲಿಲ್ಲ ಎಂದು ಗೋವರ್ಧನ್ ಕೇರಳ ಎಸ್‌ಐಟಿ ಮುಂದೆ ಹೇಳಿಕೊಂಡಿದ್ದಾರೆ. ಮುಂದೆ ತನಿಖೆಗೆ ಕರೆದಾಗ ಬರಬೇಕಾಗುತ್ತದೆ ಎಂದು ಹೇಳಿ ಅವರನ್ನು ವಿಚಾರಣೆ ನಡೆಸಿ ಬಿಟ್ಟು ಕಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post