ಹೈದರಾಬಾದ್ : ಡಿಸೆಂಬರ್ 4ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬಕ್ಕೆ ನಟ ಅಲ್ಲು ಅರ್ಜುನ್ ಮತ್ತು ಅವರ ಬ್ಲಾಕ್‌ಬಸ್ಟರ್ ಪುಷ್ಪ 2 ಚಿತ್ರ ತಂಡ 2 ಕೋಟಿ ರೂಪಾಯಿಯ ಆರ್ಥಿಕ ನೆರವು ಘೋಷಿಸಿದೆ.
ಡಿಸೆಂಬರ್ 5ರಂದು ‘ಪುಷ್ಪ 2: ದಿ ರೂಲ್’ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿತ್ತು. ಡಿ.4ರ ರಾತ್ರಿ ವಿಶೇಷ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಈ ಜನಸಮೂಹದಲ್ಲಿ ಅಭಿಮಾನಿ ಪ್ರಾಣ ಕಳೆದುಕೊಂಡಿದ್ದರು. ದುರಂತವೆಂದರೆ, ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟರೆ, ಅವರ 8 ವರ್ಷ ವಯಸ್ಸಿನ ಮಗ ಶ್ರೀ ತೇಜ್ ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ ಅವರಿಗೆ ಚಿಕಿತ್ಸೆ ಮುಂದುವರಿದಿದೆ.
ಬಾಲಕನಿರುವ ಆಸ್ಪತ್ರೆಗೆ ಭೇಟಿ ಕೊಟ್ಟ ಅಲ್ಲು ಅರ್ಜುನ್ ತಂದೆ: ಗಾಯಾಳು ಬಾಲಕ ಚಿಕಿತ್ಸೆ ಪಡೆಯುತ್ತಿರುವ ಕಿಮ್ಸ್ ಆಸ್ಪತ್ರೆಗೆ ಅಲ್ಲು ಅರ್ಜುನ್ ಅವರ ತಂದೆ, ಹಿರಿಯ ನಿರ್ಮಾಪಕ ಅಲ್ಲು ಅರವಿಂದ್ ಮತ್ತು ಪುಷ್ಪಾ 2 ನಿರ್ಮಾಪಕರು ಭೇಟಿ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅಲ್ಲು ಅರವಿಂದ್, ಬಾಲಕನ ಸ್ಥಿತಿ ಸುಧಾರಿಸಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ಭರವಸೆ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಶ್ರೀ ತೇಜ್ ಅವರನ್ನು ಈಗ ವೆಂಟಿಲೇಟರ್‌ನಿಂದ ತೆಗೆದು, ಚಿಕಿತ್ಸೆ ಮುಂದುವರಿಸಿದ್ದಾರೆ. ಶೀಘ್ರದಲ್ಲೇ ಸಂಪೂರ್ಣ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.
2 ಕೋಟಿ ರೂಪಾಯಿಗಳ ಪೈಕಿ ಅಲ್ಲು ಅರ್ಜುನ್ ಅವರಿಂದ 1 ಕೋಟಿ ರೂ., ಪುಷ್ಪ 2 ನಿರ್ಮಿಸಿರುವ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್‌ನಿಂದ 50 ಲಕ್ಷ ರೂ. ಮತ್ತು ನಿರ್ದೇಶಕ ಸುಕುಮಾರ್ ಅವರಿಂದ 50 ಲಕ್ಷ ರೂಪಾಯಿ ಬಂದಿದೆ. ಸಂತ್ರಸ್ತ ಕುಟುಂಬಕ್ಕೆ ವಿತರಿಸಲು ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ (ಎಫ್‌ಡಿಸಿ) ಅಧ್ಯಕ್ಷ ದಿಲ್ ರಾಜು ಅವರಿಗೆ ಅಲ್ಲು ಅರವಿಂದ್ ಖುದ್ದು ಚೆಕ್‌ಗಳನ್ನು ಹಸ್ತಾಂತರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ, ಅಲ್ಲು ಅರವಿಂದ್ ಅವರು ಬಾಲಕ ಶ್ರೀ ತೇಜ್ ಚೇತರಿಸಿಕೊಳ್ಳುತ್ತಿರುವ ಬಗ್ಗೆ ತಮ್ಮ ಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಕಾನೂನು ಪ್ರಕ್ರಿಯೆಗಳಿಂದಾಗಿ ಮೃತ ರೇವತಿ ಕುಟುಂಬವನ್ನು ಖುದ್ದು ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post