ಮಂಗಳೂರು, ಡಿಸೆಂಬರ್ 25: ವ್ಯಕ್ತಿಯೋರ್ವ ನಕಲಿ ಚಿನ್ನ ಅಡವಿಟ್ಟು 2 ಕೋಟಿಗೂ ಅಧಿಕ ರೂ. ಸಾಲ ಪಡೆದು ಮಂಗಳೂರಿನ ಸಮಾಜ ಸೇವಾ ಸಹಕಾರಿ ಸಂಘಕ್ಕೆ ವಂಚಿಸಿರುವ ಆರೋಪ ಕೇಳಿಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಲ ಗ್ರಾಮದ ಅಬೂಬಕ್ಕರ್ ಸಿದ್ದಿಕ್ ವಂಚಿಸಿದ ಆರೋಪಿ. 500 ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ಅಬೂಬಕ್ಕರ್ ಸಿದ್ದಿಕ್ 2,11,89,800 ರೂ. ಸಾಲ ಪಡೆದು, ಮೋಸ ಮಾಡಿದ್ದಾನೆ. ಹೀಗಾಗಿ, ಅಬೂಬಕ್ಕರ್ ಸಿದ್ದಿಕ್, ಬ್ಯಾಂಕ್ ಆಡಳಿತ ಮಂಡಳಿ ಮತ್ತು ನೌಕರರ ವಿರುದ್ಧ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನ ನಕಲಿ ಎಂದು ಗೊತ್ತಿದ್ದರೂ ಚಿನ್ನ ಪರೀಕ್ಷಕ ವಿವೇಕ್ ಆಚಾರ್ಯ ಅಸಲಿ ಎಂದು ಸರ್ಟಿಫಿಕೇಟ್ ನೀಡಿದ್ದಾನೆ. 2023ರ ನವೆಂಬರ್ ನಿಂದ 2024ರ ಫೆಬ್ರವರಿವರೆಗೆ ನಕಲಿ ಚಿನ್ನ ಅಡವಿಟ್ಟು ಕೋಟಿ ಕೋಟಿ ಲೂಟಿ ಮಾಡಲಾಗಿದೆ. ಮೂರು ತಿಂಗಳ ಅವಧಿಗೆ ಎಕ್ಸ್‌ಪ್ರೆಸ್ ಗೋಲ್ಡ್ ಲೋನ್ ನಡಿ ನಕಲಿ ಚಿನ್ನವಿಟ್ಟು ಅಬೂಬಕ್ಕರ್ ಸಿದ್ದೀಕ್ ಮೋಸ ಮಾಡಿದ್ದಾನೆ. ಈ ನಡುವೆ ಹೊಸ ಮ್ಯಾನೇಜರ್ ಅನುಮಾನ ಬಂದು ಪರೀಕ್ಷಿಸಿದಾಗ ನಕಲಿ ಚಿನ್ನ ಎಂಬುದು ಪತ್ತೆಯಾಗಿದೆ. ಆದರೆ ಕೋಟ್ಯಾಂತರ ರೂ. ಗೋಲ್ ಮಾಲ್ ಮುಚ್ಚಿಹಾಕಲು ಆಡಳಿತ ಮಂಡಳಿ ಯತ್ನಿಸಿದೆ ಎಂಬ ಆರೋಪ ಕೇಳಿಬಂದಿದೆ.
ನಕಲಿ ಚಿನ್ನವನ್ನು ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಿದ್ದಾಗಿ ತೋರಿಸಿ ಗೋಲ್ಮಾಲ್ ಮುಚ್ಚಿ ಹಾಕಲು ಯತ್ನಿಸಲಾಗಿದೆ. ಚಿನ್ನ ಪರೀಕ್ಷಕ ವಿವೇಕ್ ಆಚಾರ್ಯನೇ ಮತ್ತೆ ಹರಾಜಿನಲ್ಲಿ ನಕಲಿ ಚಿನ್ನ ಖರೀದಿಸಿದ್ದಾಗಿ ತೋರಿಸಿ ಗೋಲ್ಮಾಲ್ ಮುಚ್ಚಲು ಯತ್ನಿಸಲಾಗಿದೆ. ಉಳಿದ ಹಣ ತುಂಬಲು ಬ್ಯಾಂಕ್ ಸಿಬ್ಬಂದಿ ಹೆಸರಿನಲ್ಲಿ ಸಾಲ ಪಡೆದು ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಆರೋಪಿ ಅಬುಬಕ್ಕರ್ ಗೆ ಬ್ಯಾಂಕ್ ನ ಕೆಲ ಸಿಬ್ಬಂದಿಯ ಖಾತೆಯಿಂದಲೇ ಹಣ ವರ್ಗಾವಣೆ ಮಾಡಲಾಗಿದೆ.
ಸಮಾಜ ಸೇವಾ ಸಹಕಾರಿ ಸಂಘ ಜಿಲ್ಲೆಯಲ್ಲಿ 16 ಶಾಖೆ ಹೊಂದಿದೆ. ಮಂಗಳೂರಿನ ಪಡೀಲ್ನ ಶಾಖೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರವಾಗಿದೆ ಎಂಬ ಆರೋಪ ಕೇಳಿಬಂದಿದೆ. ಚಿನ್ನ ಪರೀಕ್ಷೆ ನಡೆಸುವ ಸರಪ, ಬ್ಯಾಂಕ್ನ ಅಧ್ಯಕ್ಷ, ನಿರ್ದೇಶಕರು ಮ್ಯಾನೇಜರ್, ಸಿಬ್ಬಂದಿ ಸಹಕಾರದಿಂದ ಅವ್ಯವಹಾರ ನಡೆದಿದೆ ಎಂಬ ಆರೋಪವಿದೆ. ಈ ಬಗ್ಗೆ ಬ್ಯಾಂಕ್ನ ಸದಸ್ಯರು, ಮಾಜಿ ನಿರ್ದೇಶಕ ಡಿ.ಲೋಕನಾಥ್ ದೂರಿನ ಮೇರೆಗೆ 28 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಬ್ಯಾಂಕ್ನ ಸರಪ ವಿವೇಕ್ ಆಚಾರ್ಯನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿ ಅಬೂಬಕ್ಕರ್ ಸಿದ್ದಿಕ್ಗಾಗಿ ಹುಡುಕಾಟ ಮುಂದುವರೆದಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪ್ರಕರಣ ಸಂಬಂಧ ದೂರುದಾರ ಲೋಕನಾಥ್.ಡಿ ಮಾತನಾಡಿ, ಅಬೂಬಕ್ಕರ್ ಸಿದ್ದಿಕ್ ಮೊದಲಿನಿಂದಲೂ ಬ್ಯಾಂಕ್ನ ಗ್ರಾಹಕರಾಗಿದ್ದರು. 2023ರ ನವೆಂಬರ್ ತಿಂಗಳಿನಲ್ಲಿ ಒಂದೇ ರೀತಿಯ 500 ನಕಲಿ ಚಿನ್ನದ ಬಳೆ ಅಡವಿಟ್ಟು, ಸಾಲ ಪಡೆದಿದ್ದಾರೆ. ಸಾಲವನ್ನು ಮೂರು ತಿಂಗಳಲ್ಲಿ ತೀರಿಸಬೇಕಿತ್ತು ಎಂದು ಹೇಳಿದರು.
ಆದರೆ, ಸಾಲ ತೀರಸದೆ ಇದ್ದಾಗ, ಬ್ಯಾಂಕ್ನ ಪ್ರಭಾರ ಮ್ಯಾನೇಜರ್ ಅವರು ಅನುಮಾನಗೊಂಡು ಬೇರೆಯವರಿಂದ ಮರು ತಪಾಸಣೆ ನಡೆಸಿದಾಗ ಚಿನ್ನ ನಕಲಿ ಎಂದು ಗೊತ್ತಾಗಿದೆ. ತಕ್ಷಣ ಜನರಲ್ ಮ್ಯಾನೇಜರ್ ಸರಫ್ ಅವರಿಗೆ ಪತ್ರ ಬರೆದಿದ್ದಾರೆ. ಸರಿಯಾಗಿ ಚಿನ್ನವನ್ನು ಪರೀಕ್ಷೆ ಮಾಡದ ಕಾರಣ ಬ್ಯಾಂಕ್ಗೆ 2 ಕೋಟಿ ರೂಪಾಯಿಗೂ ಅಧಿಕ ನಷ್ಟ ಆಗಿದೆ. ನೀನು ಅದನ್ನು ತಕ್ಷಣ ಪಾವತಿಸುವಂತೆ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post