ಮಂಗಳೂರು: “ನಗರದ ಮೀನುಗಾರಿಕಾ ಬಂದರಿನ 3ನೇ ಹಂತದ ಕಾಮಗಾರಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಂಗಳೂರು ಹಳೆ ಬಂದರು ವ್ಯಾಪ್ತಿಯಲ್ಲಿ 11 ಫ್ಲೋಟಿಂಗ್ ಜೆಟ್ಟಿ ಕಾಮಗಾರಿಗಳು ಮಂಜೂರಾಗಿವೆ. ಉಳ್ಳಾಲ ಕೋಡಿಯಲ್ಲಿ ನಾಡದೋಣಿಗಳು ತಂಗಲು ಜೆಟ್ಟಿ ನಿರ್ಮಿಸಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ” ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸಮಾಜದಲ್ಲಿ ಯಾವುದೇ ವರ್ಗದವರ ನೈತಿಕ ಪೊಲೀಸ್‌ಗಿರಿ ಸಹಿಸುವ ಪ್ರಶ್ನೆಯೇ ಇಲ್ಲ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಾನೂನನ್ನು ಕೈಗೆತ್ತಿಕೊಳ್ಳುವ ಸಮಾಜಘಾತಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇಲಾಖೆಗಳ ಕಾನೂನು ಕ್ರಮದ ಜತೆಗೆ ಸಮಾಜದಲ್ಲಿರುವ ಇಂತಹ ದುಷ್ಟ ಶಕ್ತಿಗಳಿಗೆ ಸಮಾಜವೇ ಬಹಿಷ್ಕಾರ ಹಾಕಿದರಷ್ಟೇ ನಿರ್ನಾಮ ಮಾಡಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಸಾಜ್ ಪಾರ್ಲರ್‌ನಲ್ಲಿ ರಾಮ ಸೇನೆಯ ಕಾರ್ಯಕರ್ತರ ದಾಂಧಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಪೊಲೀಸರ ಗಮನಕ್ಕೆ ತರಬೇಕು ಎಂದರು.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ನೆಹರೂ ಮೈದಾನದಲ್ಲಿ ರವಿವಾರ ಧ್ವಜಾರೋಹಣಗೈದು ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳಿಗೆ 1,236 ಹಾಗೂ ಪ್ರೌಢಶಾಲೆಗಳಿಗೆ 300 ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳನ್ನು ಅಧಿಸೂಚಿಸಲಾಗಿದ್ದು, 1.32 ಲಕ್ಷ ಪ್ರಕರಣಗಳು ವಿಮೆಗೆ ನೋಂದಣಿಗೊಂಡಿವೆ. ಅಡಿಕೆ ಹಳದಿ ಎಲೆ ರೋಗ ನಿಯಂತ್ರಣಕ್ಕಾಗಿ ಸಂಶೋಧನೆ ಕೈಗೊಳ್ಳಲು ಸಿಪಿಸಿಆರ್‌ಐಗೆ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಪಂಚ ಗ್ಯಾರಂಟಿಗೆ ಯಶಸ್ಸು : ದ.ಕ. ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆ ಯಶಸ್ಸು ಕಂಡಿದೆ. ಗೃಹಲಕ್ಷ್ಮೀ ಯೋಜನೆಯಲ್ಲಿ 1,014 ಕೋಟಿ ರೂ. ಮೊತ್ತ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಗೃಹಜ್ಯೋತಿ ಯೋಜನೆಯಲ್ಲಿ 238 ಕೋಟಿ ರೂ. ಅನುದಾನ ನಿಗದಿಗೊಳಿಸಲಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ನೀಡುವ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಾಗಿ ಪ್ರತಿ ತಿಂಗಳು 170 ರೂ. ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದ್ದು, 2.59 ಲಕ್ಷ ಪಡಿತರ ಚೀಟಿಗಳ ಕುಟುಂಬಗಳು ಇದರ ಪ್ರಯೋಜನ ಪಡೆಯುತ್ತಿವೆ. ಯುವನಿಧಿ ಯೋಜನೆಯಲ್ಲಿ ಜಿಲ್ಲೆಯಲ್ಲಿ 4,184 ಮಂದಿ ನೋಂದಣಿಗೊಂಡಿದೆ. ಶಕ್ತಿ ಯೋಜನೆಯಲ್ಲಿ 7.19 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
Discover more from Coastal Times Kannada
Subscribe to get the latest posts sent to your email.
Discussion about this post