ಮಂಗಳೂರು: “ನಿವೃತ್ತ ಡಿಐ-ಐಜಿಪಿ ಓಂಪ್ರಕಾಶ್ ಹತ್ಯೆ ಪ್ರಕರಣದ ಹಿಂದೆ ಪಿಎಫ್ಐ ಕೈವಾಡವಿರುವ ಬಗ್ಗೆ ತನಿಖೆಯಾಗಲಿ” ಎಂದು ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಆಗ್ರಹಿಸಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಮೃತರ ಪತ್ನಿ ಪಲ್ಲವಿಯವರು ಓಂಪ್ರಕಾಶ್ ಅವರಿಗೆ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಪಿಎಫ್ಐ ಜೊತೆ ನಂಟು ಇದ್ದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವಾಗ ಎಲ್ಲ ರೀತಿಯ ಕ್ರಿಮಿನಲ್ಗಳ ಪರಿಚಯವಾಗಿರುತ್ತದೆ. ನಿವೃತ್ತರಾದ ಬಳಿಕ ಅವರಿಗೆ ಯಾವ ರೀತಿಯ ಸಂಪರ್ಕವಿತ್ತು ಎಂಬುದು ತಿಳಿಯಬೇಕಿದೆ. ಪೊಲೀಸ್ ಇಲಾಖೆಯಲ್ಲಿ ನಿಷೇಧಿತ ಪಿಎಫ್ಐ ಸದಸ್ಯರನ್ನು ನೇಮಕ ಮಾಡಲಾಗಿದೆಯೇ ಎಂಬ ಪರಿಶೀಲನೆ ನಡೆಯಬೇಕು. ಓಂಪ್ರಕಾಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ವಿಧಾನಸಭೆ ಸ್ಪೀಕರ್ ಅವರನ್ನು ವಿಚಾರಣೆಗೊಳಪಡಿಸಬೇಕು” ಎಂದು ಒತ್ತಾಯಿಸಿದರು.
“ಮೃತರ ಪತ್ನಿ ಪಲ್ಲವಿ ಮತ್ತು ಮಗಳು ಕೃತಿಯವರ ಮಾನಸಿಕ ಆರೋಗ್ಯದ ಬಗ್ಗೆ ವಿಧವಿಧವಾಗಿ ಚರ್ಚೆಯಾಗುತ್ತಿದೆ. ಪೊಲೀಸರು ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಅಣತಿಯಂತೆ ತನಿಖೆ ಮಾಡುತ್ತಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ. ಪೊಲೀಸ್ ಇಲಾಖೆಯ ಕಾನ್ಸ್ಟೇಬಲ್ ಹಾಗೂ ಪಿಎಸ್ಐಗಳು ನನಗೆ ಕರೆ ಮಾಡಿ ಅಳುತ್ತಿದ್ದಾರೆ. ಇಷ್ಟು ದಿನ ಇಲಾಖೆಯಲ್ಲಿ ಮೇಲಾಧಿಕಾರಿಗಳ ಕಾಟವಿದ್ದರೂ ಮನೆಗೆ ಹೋಗಿ ನೆಮ್ಮದಿಯಿಂದ ಮಲಗಬಹುದಿತ್ತು. ಆದರೆ ಡಿಜಿಯವರ ಹತ್ಯೆಯಾದ ಬಳಿಕ ಮನೆಗೆ ಹೋಗಿ ಮಲಗಲೂ ಸಹ ಭಯವಾಗುತ್ತಿದೆ” ಎಂದು ಹೇಳುತ್ತಿದ್ದಾರೆ ಎಂದರು.
ಓಂಪ್ರಕಾಶ್ ರವರ ಕೊಲೆ ಪ್ರಕರಣದಲ್ಲಿ ಯಾವ ರೀತಿ ಪಿಎಫ್ಐ ಸದಸ್ಯರ ಕೈವಾಡವಿದೆ ಎಂಬ ಬಗ್ಗೆ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿ ಪೊಲೀಸ್ ಡಿಜಿಪಿ ಮತ್ತು ಐಜಿಪಿ ಅಲೋಕ್ ಮೋಹನ್ ಅವರಿಗೆ ಪತ್ರ ಬರೆದಿರುತ್ತೇನೆ, ಇನ್ನಾದರೂ ಅಲ್ಪ ಸಂಖ್ಯಾತರ ಓಲೈಕೆಗಾಗಿ ದಲಿತ ಸಮುದಾಯಕ್ಕೆ ಸೇರಿದ ಪೊಲೀಸ್ ಅಧಿಕಾರಿಗಳನ್ನು, ಅವರ ಮನೆಯ ಮಹಿಳೆಯರನ್ನು ಬಲಿ ನೀಡುವುದನ್ನು ನಿಲ್ಲಿಸಿರಿ ಎಂದು ಮುಖ್ಯಮಂತ್ರಿಗಳಲ್ಲಿ ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post